ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ನ ಮತ್ತೊಬ್ಬ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.
ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿರುವ ಒಂದಿಲ್ಲೊಂದು ಅರ್ಜಿಗಳ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಿದ್ದು, ಈಗ 15ನೇ ನ್ಯಾಯಮೂರ್ತಿಯಾಗಿ ಪಿ.ಎಂ.ನವಾಜ್ ಅವರು ಹಿಂದೆ ಸರಿದಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿರುವ ರಾಘವೇಶ್ವರ ಶ್ರೀಗಳ ಆಡಳಿತಾವಧಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ. ಅವರನ್ನು ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಸಬೇಕೆಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆಗೆ ಬಂದಾಗ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರ ಜತೆ ನ್ಯಾಯಪೀಠದಲ್ಲಿ ಕುಳಿತಿದ್ದ ಪಿ.ಎಂ.ನವಾಜ್ ಅವರು ತಾವು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮತ್ತೊಂದು ನ್ಯಾಯಪೀಠಕ್ಕೆ ನಿಗದಿಪಡಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ತಿಳಿಸಲಾಗಿದೆ.
ಈ ಹಿಂದೆ ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾದ ಅತ್ಯಾಚಾರ-ಬೆದರಿಕೆ ಆರೋಪ ಸೇರಿದಂತೆ ಇತರ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಹಿಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಸೇರಿದಂತೆ ಹಲವಾರು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.