ಬೆಂಗಳೂರು: ನಗರದ ಚಾಲುಕ್ಯ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಹಾಗೂ ಆ ವೃತ್ತವನ್ನು ನವೀಕರಣಗೊಳಿಸಲಾಗಿದೆ. ಜೊತೆಗೆ ಆ. 26 ರಂದು ಸಿಎಂ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಆದರೆ ಇದರ ಮರುನಿರ್ಮಾಣಕ್ಕೆ ಕೆಲಸ ಮಾಡಿದ ಹಾಗೂ ಅನುದಾನ ನೀಡಿದ ಮಾಜಿ ಮೇಯರ್ ಗಂಗಾಂಬಿಕೆ ಅವರನ್ನು ಕಡೆಗಣಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ.
ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಮೇಯರ್ ವಿವೇಚನೆಗೆ ಬಿಟ್ಟ ಅನುದಾನದಲ್ಲಿ 1.50 ಕೋಟಿ ರೂ. ವೆಚ್ಚ ಮಾಡಿ, ಶೇಕಡಾ 70ರಷ್ಟು ನವೀಕರಣದ ಕೆಲಸ ಮುಗಿಸಿದ್ದರು. ಅನುಭವ ಮಂಟಪದ ಪರಿಕಲ್ಪನೆ ಅಡಿಯಲ್ಲಿ ಬಸವಣ್ಣನ ವಚನ, ತತ್ವಗಳನ್ನು ಕೆತ್ತಿಸಲಾಗಿದೆ.
ಗಂಗಾಂಬಿಕೆ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದು. ಅವರು ನಮ್ಮ ಸಮುದಾಯದ ದಿಟ್ಟ ಮಹಿಳೆ. ಅವರ ಹೆಸರನ್ನು ಶಿಲಾನ್ಯಾಸದ ಫಲಕದಲ್ಲಿ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ನಮೂದಿಸುವುದರಿಂದ ನಮ್ಮ ಸಮುದಾಯಕ್ಕೆ ಗೌರವ ತಂದುಕೊಡುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಹೀಗಾಗಿ ಚಾಲುಕ್ಯ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಪ್ರಾಕಾರ ಮರುವಿನ್ಯಾಸಗೊಳಿಸಲು ಶ್ರಮಿಸಿದ ಮಾಜಿ ಮೇಯರ್ ಗಂಗಾಂಬಿಕೆಯವರನ್ನು ಕಡೆಗಣಿಸಬಾರದೆಂದು ಆಗ್ರಹಿಸಿದ್ದಾರೆ.