ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಬಲ ವ್ಯಕ್ತಪಡಿಸಿದೆ. ಏನಾದರೂ ಕೇಂದ್ರದ ನಾಯಕರು ಹೆಚ್ಚು ಕಡಿಮೆ ಮಾಡಿದರೆ ಈ ಹಿಂದೆ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜೆ.ಹೆಚ್. ಪಟೇಲ್, ಎಸ್.ಆರ್.ಬೊಮ್ಮಾಯಿ ನಂತರ ನಡೆದ ಇತಿಹಾಸ ಮರುಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸುವ ನಿರ್ಧಾರಕ್ಕೆ ವೀರಶೈವ ಮಹಾಸಭಾದಿಂದ ಅಭಿನಂದಿಸಲು ಬಂದಿದ್ದೆವು ಎನ್ನುತ್ತಾ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಿ ಬಿಜೆಪಿ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಹಿಂದೆ ಇತರ ಲಿಂಗಾಯತ ನಾಯಕರ ಬದಲಾವಣೆ ಮಾಡಿದಾಗ ಆದ ಘಟನೆಯ ರೀತಿಯೇ ಆಗುತ್ತದೆ. ಬಿಎಸ್ವೈ ಸಿಎಂ ಆಗಿ ಮುಂದುವರಿಯಬೇಕು ಅನ್ನೋದು ಸಮುದಾಯದ ಇಚ್ಚೆ. ಬದಲಾವಣೆಗೆ ಕೈ ಹಾಕಿದರೆ ನಿರ್ನಾಮ ಖಂಡಿತ. ಜನರ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ತಿಳಿದುಕೊಳ್ಳಬೇಕು ಎಂದರು.
ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ. ವೀರಶೈವ ಮಹಾಸಭೆ ಅವರ ಜೊತೆಗಿದೆ. ಈ ಮಾತನ್ನ ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಹೈಕಮಾಂಡ್ ಬಿಎಸ್ವೈ ಇಳಿಸಲು ತೀರ್ಮಾನ ಮಾಡಿದ್ದಾರೆ ಅನ್ನೋದು ಸುಳ್ಳು, ಏನೂ ಆಗೋದಿಲ್ಲ. ಯಡಿಯೂರಪ್ಪ ಇದ್ದರೆ ಬಿಜೆಪಿ ಉಳಿಯುತ್ತದೆ. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಕತೆ ಮುಗೀತು ಅಷ್ಟೇ ಎಂದು ಎಚ್ಚರಿಸಿದರು.