ಬೆಂಗಳೂರು: ಎರಡು ದಿನಗಳ ಬಳಿಕ ಕಾವಲ್ ಬೈರಸಂದ್ರದಲ್ಲಿರುವ ತಮ್ಮ ನಿವಾಸಕ್ಕೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಂದಿದ್ದಾರೆ. ಈ ವೇಳೆ ಧ್ವಂಸಗೊಂಡಿರುವ ಮನೆ ಕಂಡು ಅವರು ಭಾವುಕರಾದರು.
ಮನೆಯಲ್ಲಿದ್ದ ದುಬಾರಿ ಬೆಲೆಯ ಪಿಠೋಪಕರಣ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಸುಟ್ಟಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದರು. ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಶಾಸಕ, ನಿಜಕ್ಕೂ ಮನೆ ಧ್ವಂಸಗೊಳಿಸಿರುವುದು ಬೇಸರ ತರಿಸಿದೆ. ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಇದ್ದೆವು. ನನ್ನ ಮನೆ ಒಡೆದು ಹಾಕುವಷ್ಟು ಏನು ಕೋಪವಿತ್ತು ಎಂದು ಕಿಡಿಗೇಡಿಗಳನ್ನು ಪ್ರಶ್ನಿಸಿದರು.
ಘಟನೆ ನಡೆದ ದಿನದಂದು ನಾವು ಯಾರೂ ಮನೆಯಲ್ಲಿ ಇರಲಿಲ್ಲ. ದೇವಸ್ಥಾನಕ್ಕೆ ಹೋಗಿದ್ದೆವು. ಒಂದು ವೇಳೆ ಮನೆಯಲ್ಲಿ ಇದ್ದಿದ್ದರೆ ನಾವು ಏನಾಗುತ್ತಿದ್ದೆವೋ ಗೊತ್ತಿಲ್ಲ. ಕಿಡಿಗೇಡಿಗಳು ಪೂರ್ವ ನಿಯೋಜಿತವಾಗಿ ಈ ದುಷ್ಕೃತ್ಯ ಎಸಗಿರುವುದು ಗೊತ್ತಾಗಿದೆ. ನನ್ನ ತಂಗಿ ಮಗ ನವೀನ್ ಪೋಸ್ಟ್ ಮಾಡಿದ್ದರೆ, ಕಾನೂನು ಹೋರಾಟ ಮಾಡಬಹುದಾಗಿತ್ತು. ಏಕಾಏಕಿ ಮನೆ ಧ್ವಂಸ ಮಾಡಿ ಗದ್ದಲ ಎಬ್ಬಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದೃಶ್ಯಾವಳಿ ನೋಡಿದರೆ ಕಿಡಿಗೇಡಿಗಳು ನನ್ನ ಕ್ಷೇತ್ರದ ಜನರಲ್ಲ. ಯಾರೋ ಹೊರಗಿನವರು ಬಂದು ಕೃತ್ಯ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.