ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಳಂಬವಾಗುತ್ತಿರುವ ಹಿನ್ನೆಲೆ ಆತಂಕಗೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಂದು ಸುತ್ತಿನ ಟೆಂಪಲ್ ರನ್ ಆರಂಭಿಸಿದ್ದಾರೆ.
ಸುಪ್ರೀಂ ಕೋರ್ಟ್ನಿಂದ ಜಾಮೀನು ಸಿಕ್ಕ ಸಂದರ್ಭದಲ್ಲಿ ನಿರಂತರವಾಗಿ ರಾಜ್ಯದ ವಿವಿಧ ಮೂಲೆಗಳಿಗೆ ತೆರಳಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿ ಬಂದಿದ್ದ ಡಿಕೆಶಿ, ಇದೀಗ ಇನ್ನೊಂದು ಆತಂಕ ನಿವಾರಣೆ ಹಾಗೂ ಅಧಿಕಾರ ಪಡೆಯಲು ಟೆಂಪಲ್ ರನ್ ಶುರು ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಗುರುವಾರ ಮಧ್ಯಪ್ರದೇಶದ ಪೀತಾಂಬರ ಪೀಠದ ಬಾಗಲ್ಮುಖಿ ಹಾಗೂ ದೂಮವತಿ ದೇಗುಲದಲ್ಲಿ ಡಿ.ಕೆ.ಶಿವಕುಮಾರ್ ವಿಶೇಷ ಹೋಮ, ಪೂಜೆ ನೆರವೇರಿಸಿದ್ದರು. ಇದರ ಮುಂದುವರಿದ ಭಾಗವಾಗಿ ಇಂದಿನಿಂದ ಎರಡು ದಿನ ರಾಜ್ಯದ ವಿವಿಧ ದೇಗುಲಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇಂದು ಬೆಳಗ್ಗೆ 10ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಏರ್ ಇಂಡಿಯಾ ವಿಮಾನದ ಮೂಲಕ ತೆರಳಿ, ಸಂಜೆ 4ಕ್ಕೆ ಯಾದಗಿರಿ ಜಿಲ್ಲೆಯ ಗೋನಾಳದ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಅಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ಪೂಜೆ, ಹೋಮ, ಹವನ ನಡೆಯಲಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ ಕಲಬುರಗಿಯಲ್ಲಿ ಉಳಿದುಕೊಳ್ಳಲಿದ್ದಾರೆ. ನಾಳೆ ಗಾಣಗಾಪುರಕ್ಕೆ ತೆರಳಿ, ಅಲ್ಲಿ ದತ್ತಾತ್ರೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದಲ್ಲದೇ ಮುಂದಿನ ದಿನಗಳಲ್ಲಿ ಕೂಡ ಅವರು ಸಾಕಷ್ಟು ದೇವಾಲಯಗಳಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನ ದೆಹಲಿಯಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಆಗಮಿಸಿರುವ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಶತಾಯಗತಾಯ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.