ಬೆಂಗಳೂರು: ನಗರದಲ್ಲಿ ಅಫ್ರಿಕಾ ಪ್ರಜೆಗಳ ಹಾವಳಿ ಮುಂದುವರೆದಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಸಾಂತ್ವನ ಕೇಂದ್ರದಲ್ಲಿರುವಾಗ ಆಫ್ರಿಕಾ ಪ್ರಜೆಗಳು ಪುಂಡಾಟಿಕೆ ಮೆರೆದಿದ್ದಾರೆ. ಡ್ರಗ್ಸ್ ಬೇಕು ಎಂದು ಸಿಬ್ಬಂದಿಯೊಂದಿಗೆ ಕಳೆದ ಒಂದು ವಾರದಲ್ಲಿ ಮೂರು ಬಾರಿ ಗಲಾಟೆ ಮಾಡಿರುವುದು ಬೆಳಕಿಗೆ ಬಂದಿದೆ.
ಡ್ರಗ್ಸ್ ಬೇಕೆಂದು ಗಲಾಟೆ:
ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳು ಪೊಲೀಸರ ವಶಕ್ಕೆ ಹೋಗುತ್ತಿದ್ದಂತೆ ಕಳ್ಳಾಟ ಆಡಿ ಅನುಚಿತ ವರ್ತನೆ ತೋರಿದ್ದಾರೆ. ಈ ಹಿನ್ನೆಲೆ, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದರೂ ಯಾವುದೇ ಆತಂಕವಿಲ್ಲದೇ ಗಲಾಟೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಡ್ರಗ್ಸ್ ಬೇಕೆಂದು ಗಲಾಟೆ ಮಾಡಿದ್ದರು. ಅಲ್ಲದೇ ಪೊಲೀಸ್ ಭದ್ರತೆ ನಡುವೆಯೂ ಕಣ್ತಪ್ಪಿಸಿ ಐವರು ಪರಾರಿಯಾಗಿದ್ದಾರೆ.
ಡಿಸಿಪಿ ಹರೀಶ್ ಪಾಂಡೆ ಏನಂದ್ರು?
ವಿದೇಶಿ ಪ್ರಜೆಗಳು ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ನಿನ್ನೆ ಮಧ್ಯರಾತ್ರಿ 2:30ರ ಸುಮಾರಿಗೆ ಘಟನೆ ನಡೆದಿದೆ. ಐವರು ವಿದೇಶಿ ಮಹಿಳೆಯರು ಮಹಿಳಾ ಸಾಂತ್ವನ ಕೇಂದ್ರದ ಗೋಡೆ ಜಿಗಿದು ಎಸ್ಕೇಪ್ ಆಗಿದ್ದಾರೆ. ಪ್ರಕರಣ ಕುರಿತು ಸಿದ್ದಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಟ್ಟಡದ ಸುತ್ತಮುತ್ತಲಿನ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗುತ್ತಿದೆ. ಪರಾರಿಯಾಗಲು ಯತ್ನಿಸುತ್ತಿದ್ದಾಗ ವಿದೇಶಿ ಪ್ರಜೆಯ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
13 ಮಂದಿ ಅಂದರ್ - ಐವರು ಎಸ್ಕೇಪ್:
ಕೆಲ ದಿನಗಳ ಹಿಂದೆ ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ, ಕೆಲ ವರ್ಷಗಳ ಹಿಂದೆ ವೀಸಾ ಹಾಗೂ ಪಾಸ್ಪೋರ್ಟ್ ಮುಕ್ತಾಯ ಆಗಿದ್ದು, ಅಕ್ರಮವಾಗಿ ವಿದೇಶಿ ಪ್ರಜೆಗಳು ನೆಲೆಸಿದ್ದರು ಎಂಬುದು ಗೊತ್ತಾಗಿತ್ತು. ಈ ಪೈಕಿ ಕೆಲವರು ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿರುವುದು ಕಂಡು ಬಂದಿತ್ತು. ಹೀಗಾಗಿ 13 ಮಂದಿಯನ್ನು ಕರೆತಂದು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ಕಣ್ತಪ್ಪಿಸಿ ಐವರು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಲಾಗುತ್ತಿದೆ ಡಿಸಿಪಿ ಮಾಹಿತಿ ನೀಡಿದ್ದಾರೆ.
ಮೂವರು ಕಾಂಗೋ, ಇಬ್ಬರು ನೈಜೀರಿಯಾ ದೇಶದ ಮಹಿಳೆಯರು ಮಧ್ಯರಾತ್ರಿ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ, ಬಾಗಿಲು ತೆಗೆದು ಭದ್ರತಾ ಸಿಬ್ಬಂದಿ ನೀರು ಕೊಟ್ಟಿದ್ದಾರೆ. ಇದೇ ಸಮಯ ಉಪಯೋಗಿಸಿಕೊಂಡು, ಸಿಬ್ಬಂದಿ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ.
ಓರ್ವ ಮಹಿಳೆ ಆಸ್ಪತ್ರಗೆ ದಾಖಲು:
ವಿದೇಶಿಯರನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂರು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ಪರಾರಿಯಾಗಿದ್ದಾರೆ. ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹತ್ತುವಾಗ ಆಯತಪ್ಪಿ ಓರ್ವ ವಿದೇಶಿ ಮಹಿಳೆ ಕಾಲು ಮುರಿದುಕೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.