ಬೆಂಗಳೂರು: ಟಿಪ್ಪು ಜಯಂತಿ ವಿಚಾರದಲ್ಲಿ ಹೈಕೋರ್ಟ್ ನೀಡಿದ ನಿರ್ದೇಶನದ ಸಮಗ್ರ ಮಾಹಿತಿಯನ್ನು ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ.
ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಎಜಿ ಪ್ರಭುಲಿಂಗ ನಾವದಗಿ ಭೇಟಿ ನೀಡಿದರು. ಹೈಕೋರ್ಟ್ ಹೇಳಿದ್ದನ್ನು ವಿವರವಾಗಿ ಸಿಎಂಗೆ ತಿಳಿಸಿದರು. ಸಾಕಷ್ಟು ದಾರ್ಶನಿಕರ ಜಯಂತಿಯನ್ನು ಸರ್ಕಾರದಿಂದ ಆಚರಿಸುವಾಗ ಟಿಪ್ಪು ಜಯಂತಿ ಒಂದನ್ನು ಮಾತ್ರ ಕೈಬಿಟ್ಟದ್ದು ಸರಿಯಲ್ಲ. ಈ ಆದೇಶವನ್ನು ಪುನರ್ ಪರಿಶೀಲನೆ ನಡೆಸಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದನ್ನು ವಿವರಿಸಿದರು.
ಆದರೆ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಮಾಡಲು ಸಾಧ್ಯವಿಲ್ಲ ಎನ್ನುವ ನಿಲುವನ್ನೇ ಸಿಎಂ ಎಜಿ ಮುಂದೆ ವ್ಯಕ್ತಪಡಿಸಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಯಾವ ರೀತಿ ಮನವರಿಕೆ ಮಾಡಿಕೊಡಬೇಕು? ಕಾನೂನು ಅಡ್ಡಿ ಆತಂಕಗಳೇನು ಎನ್ನುವುದನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.