ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ವಿಚಾರಣೆ ನಡೆಸಿದ ವೇಳೆ ರೋಚಕ ಮಾಹಿತಿಯೊಂದು ಬೆಳಕಿಗೆ ಬಂದಿದೆ.
ಆರೋಪಿ ಆದಿತ್ಯ ರಾವ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಯೂಟ್ಯೂಬ್ ನೋಡಿ ಬಾಂಬ್ ತಯಾರು ಮಾಡಲು ಮೊದಲು ಪ್ಲ್ಯಾನ್ ಮಾಡಿದ್ದನಂತೆ. ಈತ ಮಂಗಳೂರಿನ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಾ, ಆನ್ಲೈನಲ್ಲಿ ಬಾಂಬ್ ತಯಾರಿಕೆಗೆ ಬೇಕಾದ ಪೌಡರ್ ಆರ್ಡರ್ ಮಾಡಿ, ರಾತ್ರಿ ಒಬ್ಬನೇ ಇದ್ದಾಗ ಯೂಟ್ಯೂಬ್ ನೋಡಿ ಬಾಂಬ್ ತಯಾರಿ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು ಕೆಲವೊಂದು ವಿಚಾರ ತಿಳಿಯದೆ ಇದ್ದಾಗ, ಬಾಂಬ್ ಹೇಗೆ ತಯಾರಿಸಬೇಕು ಎಂದು ತಿಳಿಯಲು ಉಗ್ರ ಸಂಘಟನೆಯನ್ನ ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದ ಎಂದು ತಿಳಿದು ಬಂದಿದೆ. ಆದರೆ ಉಗ್ರ ಸಂಘಟನೆಯನ್ನ ಸಂಪರ್ಕಿಸಲು ಸಾಧ್ಯವಾಗದೇ ಇದ್ದಾಗ ತಾನೇ ತಯಾರಿಸಿದ್ದ ಬಾಂಬ್ ವಿಮಾನ ನಿಲ್ದಾಣದ ಬಳಿ ಇಟ್ಟಿದ್ದ. ಆದರೆ ಸರಿಯಾದ ರೀತಿ ಬಾಂಬ್ ತಯಾರಿಯಾಗದ ಕಾರಣ ಅದೃಷ್ಟವಶಾತ್ ಯಶಸ್ವಿ ಆಗಲಿಲ್ಲ ಎಂದು ತಿಳಿಸಿದ್ದಾನೆ.
ಮತ್ತೊಂದೆಡೆ ಬೆಂಗಳೂರು ಪೊಲೀಸರು ಆರೋಪಿಯನ್ನ ಮಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲು ತೆರಳಿದ್ರು. ಆದ್ರೆ ಆರೋಪಿಯನ್ನ ಹಸ್ತಾಂತರ ಮಾಡಬೇಕಾದರೆ ನ್ಯಾಯಾಲಯದಿಂದ ಅನುಮತಿ ಪಡೆಯ ಬೇಕಾಗುತ್ತದೆ. ಅನುಮತಿ ಪಡೆಯದ ಕಾರಣ ಮತ್ತೆ ಪೊಲೀಸರು ಆರೋಪಿಯನ್ನ ಮೂರು ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಟ್ರಾನ್ಸಿಟ್ ವಾರೆಂಟ್ ಅನುಮತಿ ಪಡೆದು, ನಂತ್ರ ಮಂಗಳೂರು ಪೊಲೀಸರ ವಶಕ್ಕೆ ನೀಡಲಿದ್ದಾರೆ.