ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್ನಲ್ಲಿ ರೈನ್ ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ನ ಖ್ಯಾತ ನಟಿ ಸುಧಾರಾಣಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ನಿಂದ ರಕ್ಷಣೆ ಪಡೆಯುವುದಕ್ಕೆ ನಮ್ಮ ಮುಂದಿರುವ ಅತೀ ದೊಡ್ಡ ಅಸ್ತ್ರವೆಂದರೆ ಅದು ಲಸಿಕೆ ಹಾಕಿಸಿಕೊಳ್ಳುವುದು. ರಾಯಲ್ ಮೀನಾಕ್ಷಿ ಮಾಲ್ನ ಸಹಯೋಗದಲ್ಲಿ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಲಸಿಕಾ ಅಭಿಯಾನ ಆರಂಭಿಸುವ ಮೂಲಕ ವಿಶಿಷ್ಟ ಮತ್ತು ಅತ್ಯುತ್ತಮ ಕಾರ್ಯಕ್ಕೆ ಮುಂದಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಲಸಿಕೆ ದೊರೆಯಲಿ ಎಂಬ ಕಾಳಜಿಯ ಈ ಕಾರ್ಯ ಅಭಿನಾಂದನಾರ್ಹ ಎಂದರು.
ಲಾಕ್ಡೌನ್ ತೆರವುಗೊಂಡಿದ್ದರಿಂದ ಸೋಂಕು ಮತ್ತೆ ತೀವ್ರವಾಗಿ ಹರಡುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದ್ದು, ಆ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳುವುದು ಸೂಕ್ತ. ಇಲ್ಲಿ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಭ್ಯವಿದ್ದು, ಶಾಪಿಂಗ್ ಮಾಡುವುದರ ಜೊತೆಗೆ ಸುಲಭವಾಗಿ ಲಸಿಕೆಯನ್ನು ತೆಗೆದುಕೊಳ್ಳುವುದಕ್ಕೂ ಇದು ಒಳ್ಳೆಯ ಅವಕಾಶವಾಗಿದೆ. ನಾನು ಇಲ್ಲಿ ನನ್ನ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೇನೆ. ಯಾವ ತೊಂದರೆಯೂ ಇಲ್ಲದೇ ಲಸಿಕೆ ಸುಲಭಕ್ಕೆ ದೊರೆಯಲಿದೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಅವಕಾಶವನ್ನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈ ವೇಳೆ ಶಾಪಿಂಗ್ ಮಾಡಲು ಬಂದಿದ್ದ ಸಾರ್ವಜನಿಕರೊಬ್ಬರು ಲಸಿಕೆ ಪಡೆದುಕೊಂಡು ಮಾತನಾಡುತ್ತಾ, ಇಷ್ಟು ಸುಲಭಕ್ಕೆ ಲಸಿಕೆ ದೊರೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ರೈನ್ ಬೋ ಮಕ್ಕಳ ಆಸ್ಪತ್ರೆಯು ತುಂಬಾ ಸುಲಭವಾಗಿ ಲಸಿಕೆ ದೊರೆಯುವಂತೆ ಮಾಡಿದೆ. ಹೆಚ್ಚು ಪ್ರಕ್ರಿಯೆಗಳಿಲ್ಲದೆ, ನೋಂದಾಯಿಸಿಕೊಳ್ಳದಿದ್ದರೂ ನೇರವಾಗಿ ಬಂದು ಲಸಿಕೆ ಪಡೆದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಹಿಳೆಯೊಬ್ಬರು ಮಾತನಾಡಿ, ತುಂಬಾ ದಿನಗಳಿಂದ ಲಸಿಕೆ ಪಡೆಯಲು ಕಾಯುತ್ತಾ ಇದ್ದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಯೋಚಿಸುವಂತಾಗಿತ್ತು. ಆದರೆ, ಇಲ್ಲಿ ಅತೀ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದ್ದು, ಸುರಕ್ಷಿತವಾಗಿ ಲಸಿಕೆ ಪಡೆದೆ ಎಂದು ಖುಷಿಯಿಂದ ಹೇಳಿದರು.
ಈ ಲಸಿಕಾ ಅಭಿಯಾನದ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಯ ಯುನಿಟ್ ಮುಖ್ಯಸ್ಥ ನಿತ್ಯಾನಂದ, ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ನಿರಂತರವಾಗಿ ಬೇರೆ, ಬೇರೆ ಸ್ಥಳಗಳಲ್ಲಿ ಲಸಿಕಾ ಅಭಿಯಾನಗಳನ್ನ ಆಯೋಜಿಸುತ್ತಿದ್ದೇವೆ. ನಮ್ಮ ಉದ್ದೇಶಕ್ಕೆ ರಾಯಲ್ ಮೀನಾಕ್ಷಿ ಮಾಲ್ ಕೂಡಾ ಕೈ ಜೋಡಿಸಿದ್ದು, ಅವರ ಸಹಯೋಗದಲ್ಲಿ ಮಾಲ್ಗೆ ಬರುವ ಸಾರ್ವಜನಿಕರಿಗೆ ಲಸಿಕೆ ನೀಡಿ ಅವರನ್ನ ಸೋಂಕಿನಿಂದ ರಕ್ಷಿಸುವ ಯೋಚನೆ ಈ ಅಭಿಯಾನದ್ದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವುದಷ್ಟೇ ನನ್ನ ಕೆಲಸ: ಸದಾನಂದಗೌಡ