ಬೆಂಗಳೂರು: ಹಣ ಹೂಡಿಕೆ ಮಾಡಿಸಿಕೊಂಡು ಮೂರು ವರ್ಷವಾದರೂ ಲಾಭಾಂಶ ಹಾಗೂ ಅಸಲಿ ಹಣ ನೀಡದೇ ವಂಚಿಸಿರುವುದಾಗಿ ಆಪ್ತ ಸ್ನೇಹಿತ ಸೇರಿ ಮೂವರ ವಿರುದ್ಧ ದೂರು ನೀಡಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಇಂದಿರಾನಗರ ಪೊಲೀಸರ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ನೀಡಿದರು.
ಆಪ್ತ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ, ಸಹಚರರಾದ ರಾಮಕೃಷ್ಣ ಹಾಗೂ ರಾಘವೇಶ್ವರಿ ಎಂಬುವರು ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದು ಪೊಳ್ಳು ಆಶ್ವಾಸನೆ ನೀಡಿ ಅದೇ ಹಣವನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಸಂಜನಾ ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ 4ನೇ ಎಪಿಎಂಸಿ ನ್ಯಾಯಾಲಯವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು. ಇದರಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಐಪಿಸಿ 120ಬಿ, 107, 354, 406, 420, 506, ಕಲಂ 34ರ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಠಾಣೆಗೆ ಹಾಜರಾಗಿ ದಾಖಲಾತಿ ನೀಡಿದ ಸಂಜನಾ: ಸಂಜನಾಳ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಹುಲ್ ಸೇರಿ ಮೂವರು ಆರೋಪಿತರಿಗೆ ಹಣ ಸಂದಾಯ ಮಾಡಿರುವ ಬ್ಯಾಂಕ್ನ ವಹಿವಾಟು ದಾಖಲೆ, ಹಣ ಹೂಡಿಕೆ ಮಾಡಿರುವ ಕುರಿತಂತೆ ಪೂರಕ ದಾಖಲಾತಿ ಪತ್ರಗಳನ್ನು ತನಿಖಾಧಿಕಾರಿಗಳ ಮುಂದೆ ಒದಗಿಸಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಹೇಳಿಕೆ ನೀಡಿದ್ದಾರೆ.
ಪ್ರಕರಣ ಕುರಿತಂತೆ ಸಂಜನಾರಿಂದ ಅಗತ್ಯ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಆರೋಪಿತ ಸ್ಥಾನದಲ್ಲಿರುವ ಮೂವರಿಗೂ ಇನ್ನೆರಡು ದಿನಗಳಲ್ಲಿ ನೊಟೀಸ್ ನೀಡಲಿದ್ದಾರೆ.
ಪ್ರಕರಣದ ಹಿನ್ನೆಲೆ
ಕೆಲ ವರ್ಷಗಳ ಹಿಂದೆ ಸಂಜನಾಗೆ ರಾಹುಲ್ ಪರಿಚಯವಾಗಿತ್ತು. ಕೊಲಂಬೊ ಹಾಗೂ ಗೋವಾದ ಕ್ಯಾಸಿನೊ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವುದಾಗಿ ಹೇಳಿಕೊಂಡಿದ್ದ. ತಾನು ಹೇಳಿದ ಕಡೆಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಮೂರು ವರ್ಷಗಳ ಹಿಂದೆ ಸಂಜನಾಗೆ ಆಶ್ವಾಸನೆ ನೀಡಿದ್ದ. ಇದರಂತೆ ಮತ್ತಿಬ್ಬರು ಆರೋಪಿಗಳಾದ ರಾಮಕೃಷ್ಣ ಹಾಗೂ ರಾಘವೇಶ್ವರಿ ಬ್ಯಾಂಕ್ ಖಾತೆಗಳಿಗೆ ಸಂಜನಾಳಿಂದ ಹಣ ಹೂಡಿಕೆ ಮಾಡಿಸಿದ್ದ. ಹಣ ನೀಡಿ ಕೆಲ ವರ್ಷವಾದರೂ ಲಾಭಾಂಶ ಹಣ ನೀಡಿರಲಿಲ್ಲ. ಹಲವು ಬಾರಿ ಹಣ ಹಿಂತಿರುಗಿಸುವಂತೆ ಹೇಳಿದರೂ ಹಣ ನೀಡದೆ ಸತಾಯಿಸುತ್ತಿದ್ದರು.
ತಾವು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಗಳಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಸಂಜನಾ ಆರೋಪಿಸಿ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು.