ಬೆಂಗಳೂರು : ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ದ್ವಿವೇದಿ ತಾನು ಯಾವಾಗ ಜೈಲಿನಿಂದ ಹೊರ ಬರುತ್ತೀನಿ ಅನ್ನೋ ಚಿಂತೆಯಲ್ಲಿದ್ದಾರೆ. ಯಾಕಂದ್ರೆ, ಅನಾರೋಗ್ಯದ ಹಿನ್ನೆಲೆ ನಟಿ ಸಂಜನಾ ಸದ್ಯಕ್ಕೆ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ.
ಸದ್ಯಕ್ಕೆ ರಾಗಿಣಿ ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾಧೀನ ಬ್ಯಾರಕ್ನಲ್ಲಿ ಇಬ್ಬರು ಕೈದಿಗಳ ಜೊತೆ ವಾಸವಿದ್ದು, ನನ್ನನ್ನು ಮೊದಲು ಬಂಧಿಸಲಾಗಿತ್ತು. ಆದರೂ ನನಗೆ ಜಾಮೀನು ಸಿಕ್ಕಿಲ್ಲ. ಬಳಿಕ ಬಂದ ಸಂಜನಾಗೆ ಜಾಮೀನು ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಆಪ್ತರ ಮೂಲಕ ಡ್ರಗ್ಸ್ ಖರೀದಿ ಮಾಡಿರುವುದು ಕೂಡ ಸಾಬೀತಾಗಿದೆ. ಈ ನಡುವೆಯೇ ಇದೀಗ ರಾಗಿಣಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ.
ಅದೇನೆಂದ್ರೆ ರಾಗಿಣಿಯನ್ನು 2018ರ ಬಾಣಸವಾಡಿ ಪ್ರಕರಣದಲ್ಲಿ ಕೂಡ ಆರೋಪಿ ಎಂದು ನಮೂದು ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ತಿಂಗಳು ಎರಡು ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿದ್ದು, ಇದರಲ್ಲಿ ರಾಗಿಣಿ ಪಾತ್ರದ ಬಗ್ಗೆ ಪೊಲೀಸರು ಉಲ್ಲೇಖ ಮಾಡಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ರಾಗಿಣಿ ಪೋಷಕರು ಸುಪ್ರೀಂ ಮೊರೆ ಹೋಗಿದ್ದಾರೆ.
ಏನಿದು ಪ್ರಕರಣ?
2018 ರಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತೀಕ್ ಶೆಟ್ಟಿ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಜೊತೆ ನೈಜೀರಿಯನ್ ಪ್ರಜೆಗಳನ್ನು ಸಹ ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರ ಬಂದಿದ್ದ ಪ್ರತೀಕ್ ಮತ್ತೆ ಡ್ರಗ್ಸ್ ಸಪ್ಲೈ ಮಾಡುವುದನ್ನು ಮುಂದುವರೆಸಿದ್ದ. ಇತ್ತೀಚೆಗೆ ಕಾಟನ್ ಪೇಟೆ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಈತನನ್ನು ವಿಚಾರಣೆ ಮಾಡಲಾಗಿತ್ತು. ತನಿಖೆ ವೇಳೆ ಪ್ರತೀಕ್, ರಾಗಿಣಿ ಆಪ್ತ ರವಿಶಂಕರ್ ಸಹಚರ ಎಂಬುದು ತಿಳಿದುಬಂದಿದೆ. ಹೀಗಾಗಿ ಪ್ರತೀಕ್ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಈತನ ಜೊತೆ ಆದಿತ್ಯಾ ಅಗರ್ವಾಲ್ ನನ್ನು ಕೂಡ ಬಂಧಿಸಿದ್ದರು.
ಇನ್ನು ಪ್ರತೀಕ್ ಶೆಟ್ಟಿ ರಾಗಿಣಿಗೆ ಕೂಡ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ರಾಗಿಣಿ ಆಪ್ತ ರವಿಶಂಕರ್ ವಿಚಾರಣೆ ಮಾಡಿದಾಗ ರಾಗಿಣಿ ಜೊತೆಗಿನ ನಂಟಿನ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು, ಹೀಗಾಗಿ ರಾಗಿಣಿಗೆ ಬಾಣಸವಾಡಿ ಕೇಸ್ ಕೂಡ ಸಂಕಷ್ಟಕ್ಕೀಡು ಮಾಡಿದೆ.
ಇದನ್ನೂ ಓದಿ: ಜಾಮೀನು ಕೋರಿ ಸುಪ್ರೀಂ ಕೊರ್ಟ್ ಮೊರೆ ಹೋದ ನಟಿ ರಾಗಿಣಿ