ಬೆಂಗಳೂರು: ಬೈಕ್ ಅಪಘಾತವಾಗಿ ಇಹಲೋಕ ತ್ಯಜಿಸಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರದ ಜವಾಬ್ದಾರಿಯನ್ನು ನಟ ನೀನಾಸಂ ಸತೀಶ್ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ವಹಿಸಿಕೊಂಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೂರು ಗಂಟೆಗಳ ಕಾಲ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬ ವರ್ಗದವರು ಸಂಚಾರಿ ವಿಜಯ್ಗೆ ಪೂಜೆ ಸಲ್ಲಿಸಿದರು. ಈ ಪೂಜೆಯ ಬಳಿಕ ಆ್ಯಂಬುಲೆನ್ಸ್ನಲ್ಲಿ ಪಾರ್ಥಿವ ಶರೀರವನ್ನು ಹುಟ್ಟೂರು ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಯಿತು.
ವಿಜಯ್ ಆಸ್ಪತ್ರೆ ಸೇರಿದಾಗಿನಿಂದಲೂ ಕುಟುಂಬಸ್ಥರ ಜೊತೆಗಿದ್ದ ನಟ ನೀನಾಸಂ ಸತೀಶ್ ಮಾತನಾಡಿ, ತುಮಕೂರು, ಶಿರಾ, ಹುಳಿಯಾಳ ಮಾರ್ಗವಾಗಿ ಪಾರ್ಥಿವ ಶರೀರ ರವಾನಿಸಲಾಗುತ್ತೆ. ಹುಳಿಯಾಳದಲ್ಲಿ 10 ನಿಮಿಷಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ. ವಿಜಯ್ ಸ್ವಗ್ರಾಮ ಪಂಚನಹಳ್ಳಿಗೆ ತೆರಳಲು 3 ಗಂಟೆ ಅವಧಿ ಬೇಕು. ಅಲ್ಲಿ ಸರ್ಕಾರಿ ಗೌರವಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದರು.
ಸಂಚಾರಿ ವಿಜಯ್ ಊರಿನವರಾದ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಮಾತನಾಡಿ, ಪಂಚನಹಳ್ಳಿಗೆ ಹೋಗಲು ಎರಡು ದಾರಿಗಳಿವೆ. ಕಡೂರು ತಾಲೂಕು ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕೆಂದು ಜನರು ಮನವಿ ಮಾಡಿದ್ದಾರೆ. ಕಡೂರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಕುಟುಂಬ ಸದಸ್ಯರಿಗೆ ಮಾತ್ರ ಅಂತ್ಯಕ್ರಿಯೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಕೋವಿಡ್ ನಿಯಮಾವಳಿಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗ ವಿಜಯ್ ಸ್ನೇಹಿತ ರಘು ಎಂಬುವವರ ತೋಟದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ದರೆ ವಿಜಯ್ ಜೀವ ಉಳಿಯುತ್ತಿತ್ತು: ಶಿವರಾಜ್ಕುಮಾರ್ ಕಂಬನಿ