ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ. ಆದರೆ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಕಾಲೇಜುಗಳ ಬಗ್ಗೆ ನನಗೂ ಮಾಹಿತಿ ಬಂದಿದೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ವಿಧಾನಪರಿಷತ್ ಸದಸ್ಯರ ಸಮಿತಿ ಸದಸ್ಯರು ನೀಡಿದ ವರದಿ ಸ್ವೀಕರಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಪಿಯು ಮಂಡಳಿ ನಿರ್ದೇಶಕರಿಗೆ ಈ ಬಗ್ಗೆ ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಶುಲ್ಕವನ್ನು ಯಾರೂ ಪಡೆಯಬಾರದು. ಅಂತಹ ಪ್ರಕರಣ ಕಂಡು ಬಂದರೆ ಆ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಕಟ್ಟಡ ಸುರಕ್ಷತಾ ಪ್ರಮಾಣಪತ್ರದ ಅಗತ್ಯತೆಯ ಕುರಿತಂತೆ ವಿಧಾನ ಪರಿಷತ್ ಸದಸ್ಯರ ಸಮಿತಿ ಸದಸ್ಯರು ವರದಿ ನೀಡಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ವರದಿ ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ನಾಗೇಶ್ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ಇಲ್ಲ. ಆದರೂ ನಿಯಮ ಪಾಲನೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಟ್ಟಡ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣ ಪತ್ರದ ಅವಶ್ಯಕತೆಗೆ ಸಂಬಂಧಿಸಿದ ಪರಿಶೀಲನಾ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದಲ್ಲಿ 14 ಶಿಫಾರಸುವುಳ್ಳ ವರದಿಯನ್ನು ಇಂದು ಸಚಿವರಿಗೆ ಸಲ್ಲಿಸಲಾಯಿತು.
ವರದಿಯಲ್ಲಿ ಏನಿದೆ?
1. ಅಗ್ನಿ ಸುರಕ್ಷತಾ ನಿರಾಕ್ಷೇಪಣಾ ಪತ್ರ (NOC) ನೀಡುವ ಅಧಿಕಾರವನ್ನು ವಿಕೇಂದ್ರೀಕರಿಸುವುದು: 15 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ನಿರಾಕ್ಷೇಪಣಾ ಪ್ರಮಾಣಪತ್ರ(NOC) ನೀಡುವ ಅಧಿಕಾರವನ್ನು ಆಯಾ ಜಿಲ್ಲೆಗಳ ಅಗ್ನಿ ಸುರಕ್ಷತಾ ಅಧಿಕಾರಿಗಳಿಗೆ ವರ್ಗಾಯಿಸುವ ಹಾಗೆ ಸರ್ಕಾರ ಸೂಕ್ತ ಕ್ರಮ ಜರುಗಿಸುವುದು.
2. ನೆಲಮಹಡಿ ಮಾತ್ರ ಇರುವ ಶಾಲೆ ಕಾಲೇಜುಗಳಿಗೆ ನಿರಾಕ್ಷೇಪಣಾ (NOC) ಪತ್ರ ಪಡೆಯುವುದಕ್ಕೆ ವಿನಾಯಿತಿ ನೀಡುವುದು: ತೆಲಂಗಾಣ ಸರ್ಕಾರ 3-6-2017ರಲ್ಲಿ ನಿರ್ಣಯ ಕೈಗೊಂಡು ನೆಲಮಹಡಿ ಮಾತ್ರ ಇರುವ ಶಾಲೆಗಳಿಗೆ ( 500 ಚದರ ಅಡಿ ಹಾಗೂ 6 ಮೀಟರ್‌ಗಿಂತ ಕಡಿಮೆ ಎತ್ತರ ಹೊಂದಿರುವ) NOC ಪಡೆಯುವುದಕ್ಕೆ ವಿನಾಯಿತಿ ನೀಡಿದಂತೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಲು ಕ್ರಮ ಜರುಗಿಸುವುದು.
3. ನೆಲ ಮಹಡಿ ಹೊಂದಿದ ಶಾಲಾ ಕಾಲೇಜುಗಳಿಗೆ ನಿಗದಿಪಡಿಸಿರುವ ಓವರ್ ಹೆಡ್ ಟ್ಯಾಂಕಿನ ಸಾಮರ್ಥ್ಯವನ್ನು ಕಡಿಮೆಗೊಳಿಸುವುದು: ನೆಲಮಹಡಿ ಮಾತ್ರ ಹೊಂದಿರುವ ಶಾಲೆಗಳು(500 ಚದರ್ ಅಡಿ ಏರಿಯಾ) 10,000 ಲೀಟರ್ ನೀರಿನ ಟ್ಯಾಂಕ್ ಅಳವಡಿಸಬೇಕು ಎಂಬುದರ ಬದಲಾಗಿ 2000-5000 ಲೀಟರ್‌ನ ಟ್ಯಾಂಕ್‌ನ್ನು ಹೊಂದಿದ್ದರೆ ಸಾಕು ಎಂಬುದರ ಕುರಿತು ಅಗ್ನಿ ಶಾಮಕ ಇಲಾಖೆಯವರಿಗೆ ಸುತ್ತೋಲೆ ಹೊರಡಿಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು.
4. ಶಾಲಾ ಕಟ್ಟಡ ಸ್ಥಿರತೆ ಪ್ರಮಾಣಪತ್ರ (Stability certificate) ನೀಡುವ ಅಧಿಕಾರವನ್ನು ವಿಕೇಂದ್ರಿಕರಿಸುವುದು:
ನೆಲಮಹಡಿ ಹಾಗೂ ಎಲ್ಲ ಅಂತಸ್ತುಗಳ ಶಾಲಾ ಕಟ್ಟಡಗಳಿಗೆ ಸ್ಥಿರತೆ ಪ್ರಮಾಣಪತ್ರ ನೀಡುವ ಅಧಿಕಾರವನ್ನು ಕಾರ್ಯಪಾಲಕ ಇಂಜನಿಯರ್, ಲೋಕೋಪಯೋಗಿ ಇಲಾಖೆ (ನಿರ್ಮಾಣ ಘಟಕ) ಹೊಂದಿರುವರು. ಆದರೆ ಈ ಅಧಿಕಾರವನ್ನು 15 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಶಾಲೆ ಕಟ್ಟಡಗಳಿಗೆ ಪ್ರಮಾಣಪತ್ರ ನೀಡುವುದಕ್ಕೆ ಕಾರ್ಯನಿರ್ವಾಹಕ ಅಭಿಯಂತರರ(Executive Engineer) ಬದಲಾಗಿ ಅವರಷ್ಟೇ ವಿದ್ಯಾರ್ಹತೆ, ಕೌಶಲ್ಯ ಮತ್ತು ಅನುಭವ ಹೊಂದಿರುವ ಅಸಿಸ್ಟಂಟ್ ಎಕ್ಸಿಕ್ಯುಟಿವ್ ಇಂಜಿನಿಯರಿಗೆ ವರ್ಗಾಯಿಸಲು ಸರ್ಕಾರ ಸೂಕ್ತ ನೋಟಿಫಿಕೇಶನ್ ಹೊರಡಿಸುವುದು.
5. ಹಳೆಯ ಶಾಲೆಗಳಿಗೆ ಕಟ್ಟಡ ಸ್ಥಿರತೆ ಪ್ರಮಾಣಪತ್ರ ನೀಡುವ ಚೆಕ್‌ಲಿಸ್ಟ್ ನಮೂನೆ 3ರಲ್ಲಿ ಒದಗಿಸಬೇಕಾದ ಸರ್ಟಿಫಿಕೇಟ್‌ಗಳಿಗೆ ವಿನಾಯಿತಿ ನೀಡುವುದು: ಸುವರ್ಣಮಹೋತ್ಸವ, ವಜ್ರಮಹೋತ್ಸವ ಹಾಗೂ ಶತಮಾನೋತ್ಸವ ಕಂಡ ಶಾಲೆ ಕಾಲೇಜುಗಳ ಶಿಕ್ಷಣ ಸಂಸ್ಥೆಯವರು ಕಟ್ಟಡದ ನೀಲನಕ್ಷೆ, ಕಟ್ಟಡ ನಿರ್ಮಾಣ ಮತ್ತು ಮೇಲ್ವಿಚಾರಣೆ ಮಾಡಿದವರಿಂದ ಸರ್ಟಿಫಿಕೇಟ್ ಮುಂತಾದವುಗಳನ್ನು ಒದಗಿಸಲು ಕಷ್ಟದಾಯಕವಾಗಿರುವುದರಿಂದ, ಇವುಗಳಿಗೆ ವಿನಾಯಿತಿ ನೀಡಲು ಸರ್ಕಾರ ಲೋಕೋಪಯೋಗಿ ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು.
6. ಕಟ್ಟಡ ಸುರಕ್ಷಿತ ಪ್ರಮಾಣಪತ್ರ ನವೀಕರಣ ಅವಧಿಯನ್ನು ಹೆಚ್ಚಿಸುವುದು: ನೂತನವಾಗಿ ಕಟ್ಟಿಸಿದ ಹಾಗೂ 30 ವರ್ಷದೊಳಗಿನ ಆರ್.ಸಿ.ಸಿ ಶಾಲಾ-ಕಾಲೇಜು ಕಟ್ಟಡಗಳಿಗೆ ಸುರಕ್ಷತಾ ಪ್ರಮಾಣಪತ್ರ ನವೀಕರಿಸುವ ಅವಧಿಯನ್ನು ಐದು ವರ್ಷದ ಬದಲಾಗಿ 10 ವರ್ಷಕ್ಕೊಮ್ಮೆ ಮಾಡುವುದು, ಕಟ್ಟಡ ಕಟ್ಟಸಿ 30 ವರ್ಷಗಳ ನಂತರದ ಶಾಲೆ-ಕಾಲೇಜುಗಳಿಗೆ ಈಗಿರುವ ನಿಯಮದಂತೆ 5 ವರ್ಷಕ್ಕೊಮ್ಮೆ ನವೀಕರಿಸುವ ಪದ್ಧತಿಯನ್ನು ಮುಂದುವರೆಸುವುದು.
7. ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣವನ್ನು ನಿಗದಿತ ಅವಧಿಯಲ್ಲಿ ಮಾಡುವುದು: ಶಾಲಾ ಕಾಲೇಜುಗಳ ಮುಖ್ಯಸ್ಥರು ಮಾನ್ಯತೆ ನವೀಕರಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸಿದ ಮೂರು ತಿಂಗಳೊಳಗಾಗಿ ಕ್ರಮ ಕೈಗೊಂಡು ನಿರ್ಣಯವನ್ನು ತಿಳಿಸಬೇಕು. ಇಲ್ಲವಾದಲ್ಲಿ ನವೀಕರಣವಾಗಿದೆ ಎಂದು ಭಾವಿಸಲಾಗುವುದು ಎಂಬುವ ರೀತಿಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವುದು.
8. ಕೋವಿಡ್-19 ಹಿನ್ನೆಲೆಯಲ್ಲಿ ಮಾನ್ಯತೆ ನವೀಕರಣದ ನಿಯಮ ಸಡೀಲಿಕರಣಗೊಳಿಸುವುದು: ಖಾಸಗಿ ಶಿಕ್ಷಣ ಸಂಸ್ಥೆಯವರು ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇರುವ ಕಾರಣ 2020-21, 2021-22ನೇ ಶೈಕ್ಷಣಿಕ ಸಾಲಿನ ನವೀಕರಣಕ್ಕಾಗಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿಯವರು ಕಟ್ಟಡ ಸುರಕ್ಷತಾ ಹಾಗೂ ಅಗ್ನಿ ಸುರಕ್ಷತಾ ನಿರಾಕ್ಷೇಪಣ ಪತ್ರ 6 ತಿಂಗಳೊಳಗಾಗಿ ಸಲ್ಲಿಸಬೇಕು ಎಂಬ ಕರಾರಿಗೆ ಒಳಪಟ್ಟು ಶಾಲೆ ಕಾಲೇಜುಗಳ ಮಾನ್ಯತೆಯನ್ನು ನವೀಕರಿಸಲು ಸರ್ಕಾರ ಮಾನವೀಯತೆ ದೃಷ್ಟಿಯಿಂದ ಪರಿಶೀಲಿಸುವುದು. ನವೀಕರಣದ ಆದೇಶದ ನಂತರ 6 ತಿಂಗಳೊಳಗಾಗಿ ಸಕ್ಷಮ ಪ್ರಾಧಿಕಾರದಿಂದ ಅವಶ್ಯವಿರುವ ಪ್ರಮಾಣಪತ್ರಗಳನ್ನು ಸಲ್ಲಿಸದೇ ಇದ್ದಲ್ಲಿ ನವೀಕರಣ ಆದೇಶವನ್ನು ರದ್ದು ಪಡಿಸುವುದು. ಇದನ್ನು ವಿಶೇಷ ಪ್ರಕರಣ ಎಂದು 2021-22ನೇ ಸಾಲಿಗೆ ಮಾತ್ರ ಸರ್ಕಾರ ಸೀಮಿತಗೊಳಿಸುವುದು.
9. ಸರ್ಕಾರಿ ಶಾಲಾ ಕಾಲೇಜುಗಳಲ್ಲಿಯೂ ಕೂಡಾ ಕಟ್ಟಡ ಹಾಗೂ ಅಗ್ನಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳುವುದು: ಸುಪ್ರೀಂಕೋರ್ಟ್ ತೀರ್ಪು ಹಾಗೂ ನ್ಯಾಶನಲ್ ಬಿಲ್ಡಿಂಗ್ ಕೋಡ್ ನಿಯಮಗಳನ್ವಯ ಕಡ್ಡಾಯವಾಗಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿಯೂ ಕೂಡಾ ಕಟ್ಟಡ ಹಾಗೂ ಅಗ್ನಿ ಸುರಕ್ಷತಾ ನಿಯಮಗಳನ್ನು ಅಳವಡಿಸುವುದು ಹಾಗೂ ಮುಂಬರುವ ಮುಂಗಡ ಪತ್ರ(ಬಜೆಟ್)ದಲ್ಲಿ ಇದಕ್ಕಾಗಿ ಹಣ ಕಾಯ್ದಿರಿಸುವುದು.
10. ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಶುಲ್ಕ ಕಡಿಮೆ ಮಾಡುವುದು: ಗ್ರಾಮಾಂತರ/ಹೋಬಳಿ/ಪಟ್ಟಣಪಂಚಾಯತಿ/ತಾಲ್ಲೂಕು ಮಟ್ಟದಲ್ಲಿರುವ ಶಾಲಾ-ಕಾಲೇಜುಗಳು ಆರ್ಥಿಕವಾಗಿ ಸಬಲವಾಗಿರುವುದಿಲ್ಲ. ಆದ್ದರಿಂದ ಈ ಪ್ರದೇಶಗಳಲ್ಲಿ ಇರುವ ಶಾಲೆ ಕಾಲೇಜುಗಳಿಗೆ ಪ್ರಮಾಣ ಪತ್ರ ಪಡೆಯಲು ನಿಗದಿಪಡಿಸಿದ ಶುಲ್ಕವನ್ನು ರೂ. 20,000/- ರಿಂದ ರೂ. 5,000/- ಕೈ, ಅದರಂತೆ ಜಿಲ್ಲಾಮಟ್ಟದಲ್ಲಿರುವ ಶಾಲೆಗಳಿಗೆ ರೂ. 10,000 ಕ್ಕೆ ಕಡಿಮೆಗೊಳಿಸಲು ಸರ್ಕಾರ ಸೂಕ್ತ ಕ್ರಮ ಜರುಗಿಸುವುದು.
11. ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಮಟ್ಟದ ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು: ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಮಟ್ಟದ ಇಲಾಖಾ ಮುಖ್ಯಸ್ಥರಿಗೆ, ಈಗಾಗಲೇ ಅಸ್ತಿತ್ವದಲ್ಲಿರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಶಾಲಾ ಕಟ್ಟಡಗಳನ್ನು (ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ) ನಿಯಮಾನುಸಾರ ಪರಿಶೀಲಿಸಿ ಸುರಕ್ಷತಾ ಪ್ರಮಾಣ ಪತ್ರ ನೀಡುವ ಬಗ್ಗೆ ಸೂಚನೆ ನೀಡುವುದು.
12. ಕಟ್ಟಡ ಸ್ಥಿರತೆಯ ಪ್ರಮಾಣಪತ್ರ/ಅಗ್ನಿ ಸುರಕ್ಷತೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆನ್ನು ನಿಗದಿತ ಅವಧಿಯಲ್ಲಿ ಮಾಡುವುದು: ಕಟ್ಟಡ ಸುರಕ್ಷತೆ ಪ್ರಮಾಣ ಪತ್ರ ಹಾಗೂ ಅಗ್ನಿ ಸುರಕ್ಷತಾ ಎನ್‌ಒಸಿ ಪ್ರಮಾಣ ಪತ್ರ ಪಡೆಯಲು ಶಾಲಾ ಕಾಲೇಜುಗಳ ಆಡಳಿತ ಮಂಡಳಿಯವರು ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 45 ದಿನಗಳೊಳಗಾಗಿ ನಿರ್ಧಾರ ಕೈಕೊಂಡು ತಿಳಿಸತಕ್ಕದ್ದು. ಇಲ್ಲವಾದಲ್ಲಿ ಪ್ರಮಾಣಪತ್ರ ನೀಡಿದೆ ಎಂದು ಭಾವಿಸಲಾಗುವುದು ಎಂಬ ರೀತಿಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಕೊಳ್ಳುವುದು.
13. 2017-18ರ ಸಾಲಿನ ಪೂರ್ವದಲ್ಲಿ ಅಸ್ತಿತ್ವದಲ್ಲಿರುವ ಹಾಗೂ ತದನಂತರ ಪ್ರಾರಂಭವಾದ ಶಾಲಾ ಕಾಲೇಜುಗಳು ಮಕ್ಕಳ ಸುರಕ್ಷತೆಯ ಕುರಿತು ಪಾಲಿಸಬೇಕಾದ ನಿಯಮಗಳ ಕುರಿತು ಪ್ರತ್ಯೇಕ ಪಟ್ಟಿಮಾಡಿ ಕಿರುಪುಸ್ತಕ ಬಿಡುಗಡೆ ಮಾಡುವುದು: ಸರ್ಕಾರದ ಪ್ರಧಾನಕಾರ್ಯದರ್ಶಿಗಳು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಇವರು ಶಾಲಾ ಕಟ್ಟಡ/ ಅಗ್ನಿ ಸುರಕ್ಷತೆ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನಗಳು, ಎನ್.ಬಿ.ಸಿ ನಿಯಮ ಹಾಗೂ ಎನ್.ಡಿ.ಎಮ್. ಮಾರ್ಗಸೂಚಿ (Guidelines) ಗಳನ್ನು ಕ್ರೋಢೀಕರಿಸಿ, 2017-18 ರ ಸಾಲಿನ ಪೂರ್ವದಲ್ಲಿ ಅಸ್ತಿತ್ವದಲ್ಲಿ ಇರುವ ಶಿಕ್ಷಣ ಸಂಸ್ಥೆಗಳು ಹಾಗೂ ತದನಂತರ ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಪ್ರತ್ಯೇಕವಾದ ಪಟ್ಟಿಮಾಡಿ ಇಲಾಖೆಯಿಂದ ಕಿರು ಪುಸ್ತಕ ಬಿಡುಗಡೆ ಮಾಡಲು ಸರ್ಕಾರ ಕ್ರಮ ಜರುಗಿಸುವುದು.
14. ಮೇಲ್ವಿಚಾರಣಾ ಮತ್ತು ದೂರುಗಳ ನಿರ್ವಹಣಾ ಸಮಿತಿ: ಮಕ್ಕಳ ಸುರಕ್ಷತೆ ಕುರಿತು ಏನಾದರೂ ಸಮಸ್ಯೆಗಳು/ ದೂರುಗಳು ಬಂದಂತಹ ಸಂದರ್ಭದಲ್ಲಿ ಅವುಗಳ ನಿವಾರಣೆಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿಯನ್ನು ರಚಿಸುವುದು.