ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗುಂಡೇಟು ತಿಂದು ಬಂಧಿತನಾದ ನಾಗೇಶ್ ಅಲಿಯಾಸ್ ನಾಗೇಶ್ ಬಾಬು ದಾಳಿಗೂ ಮುನ್ನ ಸಂಚು ರೂಪಿಸಿದ್ದನಂತೆ. ಈತನಿಗೆ ಕಳೆದ 7 ವರ್ಷಗಳಿಂದಲೂ ಸಂತ್ರಸ್ತೆಯ ಪರಿಚಯವಿತ್ತು. ಅಲ್ಲದೇ ಆಕೆಯಿದ್ದ ಮನೆಯಲ್ಲಿಯೇ ಒಂದು ರೂಂ ಬಾಡಿಗೆಗೆ ಪಡೆದುಕೊಂಡಿದ್ದ. ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದ ಈತನಿಗೆ ಯುವತಿ 'ನೀನು ಅಣ್ಣನಂತೆ ಇದ್ದೀಯ, ನಿನ್ನ ಲವ್ ಮಾಡಲ್ಲ' ಎಂದು ಸಾರಿ ಸಾರಿ ಹೇಳಿದ್ದಳು. ಆದರೂ ಅದನ್ನು ಕೇಳದೇ ಮೊಂಡಾಟವಾಡುತ್ತಿದ್ದನಂತೆ.
ನಾಗೇಶ್ ಮೊಂಡಾಟಕ್ಕೆ ಬೇಸತ್ತ ಯುವತಿ, ಮನೆಯವರಿಗೆ ವಿಷಯ ತಿಳಿಸಿದಾಗ ನಾಗೇಶ್ನನ್ನು ಆ ಮನೆಯಿಂದ ಖಾಲಿ ಮಾಡಿಸಿದ್ದರು. ಆದರೆ, ಅಲ್ಲಿಯೇ ಇದ್ದ ಸ್ನೇಹಿತನೊಬ್ಬನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ನಾಗೇಶ್, ಯುವತಿಯ ಬಗ್ಗೆ ಎಲ್ಲ ಮಾಹಿತಿಯನ್ನು ದಿನಂಪ್ರತಿ ಪಡೆಯುತ್ತಿದ್ದ. ಜೊತೆಗೆ ಅಕ್ಕನ ಮದುವೆ ನಿಶ್ಚಯದಲ್ಲೇ ಆಕೆಗೆ ವರ ಗೊತ್ತು ಮಾಡುವ ವಿಚಾರವನ್ನೂ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ.
ಆ್ಯಸಿಡ್ ಖರೀದಿ ಹೇಗೆ?: ಹೌಸ್ ಕೀಪಿಂಗ್ ಕೆಲಸಕ್ಕಾಗಿ ಆ್ಯಸಿಡ್ ಖರೀದಿಸುತ್ತಿದ್ದ ಕಂಪನಿಯೊಂದರ ಪರಿಚಯ ಈತನಿಗಿತ್ತು. ಆ ಆ್ಯಸಿಡ್ ಖರೀದಿದಾಗಿ ಇಂಡೆಂಟ್ ಹಾಕಿದ್ದ. 20 ಲೀ. ಕ್ಯಾನ್ ಜೊತೆಗೆ, ತಾನು ಒಂದೊಂದು ಲೀಟರ್ನ ಎರಡು ಬಾಟಲ್ ಪ್ರತ್ಯೇಕವಾಗಿ ಖರೀದಿಸಿದ್ದ ಎಂದು ತನಿಖೆಯ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆ್ಯಸಿಡ್ ಖರೀದಿಸಿದ್ದ ಈತ ಏ.27ರಂದು ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಕೇಳಿದ್ದಾನೆ. ಆಗಲೂ ಯುವತಿ ನಿನ್ನ ನಾನು ಮದುವೆಯಾಗುವುದಿಲ್ಲ, ಪ್ರೀತಿಸುವುದೂ ಇಲ್ಲ ಎಂದು ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ನಾಗೇಶ್ ಮರುದಿನ (ಏ.28ರಂದು ಆ್ಯಸಿಡ್ ದಾಳಿ ಮಾಡಲು ನಿರ್ಧರಿಸಿ ಖರೀದಿಸಿದ ಆ್ಯಸಿಡ್‌ನ ಬಾಟಲಿ ಇಟ್ಟುಕೊಂಡು ಬೈಕ್‌ನಲ್ಲಿ ಬೆಳಿಗ್ಗೆಯೇ ಸುಂಕದಕಟ್ಟೆಗೆ ಬಂದಿದ್ದ. ಅಲ್ಲಿ ಕಾದು ಕುಳಿತು ಯುವತಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಆಕೆಯ ಮೇಲೆ ಎರಚಿ ಪರಾರಿಯಾಗಿದ್ದ.
ವಕೀಲರನ್ನು ಭೇಟಿಯಾಗಿದ್ದ ಆರೋಪಿ: ಅಲ್ಲಿಂದ ಪರಾರಿಯಾದ ಆರೋಪಿ ನೇರವಾಗಿ ವಕೀಲರ ಬಳಿ ತೆರಳಿ ತಾನು ಆ್ಯಸಿಡ್ ದಾಳಿ ಮಾಡಿ ಬಂದಿದ್ದೇನೆ. ನನಗೆ ಜಾಮೀನು ಬೇಕು ಎಂದಿದ್ದಾನೆ. ಇನ್ನೂ ಎಫ್‌ಐಆರ್ ಆಗಿರುವುದಿಲ್ಲ. ಪೊಲೀಸ್ ಠಾಣೆಗೆ ಹೋಗಿ ಶರಣಾಗು. ಎಫ್‌ಐಆರ್ ಆಗಲಿದೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸೋಣ ಎಂಬುದಾಗಿ ವಕೀಲರು ಸಲಹೆ ನೀಡಿದ್ದರು ಎಂದು ಆರೋಪಿ ಹೇಳಿದ್ದಾನೆ.
ಸುಳಿವು ನೀಡಿದ ಆಟೋ ಚಾಲಕ: ಕರಪತ್ರದ ಫೋಟೋದಲ್ಲಿನ ಫೋಟೋ ಹಾಗೂ ದೇವಾಲಯದಲ್ಲಿ ಸ್ವಾಮೀಜಿ ವೇಷಧರಿಸಿ ಧ್ಯಾನದಲ್ಲಿ ಕುಳಿತ ವ್ಯಕ್ತಿಯೊಬ್ಬನಿಗೂ ಹೋಲಿಕೆ ಕಂಡು ಬಂದಿದೆ. ಇದನ್ನು ಗಮನಿಸಿದ ಆಟೋ ಚಾಲಕನೊಬ್ಬ ಪೊಲೀಸರು ನೀಡಿದ್ದ ನಂಬರ್ಗೆ ಆತನ ಫೋಟೋ ತೆಗೆದು ವಾಟ್ಸ್ಆ್ಯಪ್ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಆರೋಪಿ ನಾಗೇಶ್ ವಿರುದ್ಧ ಎಂಟು ದಿನಗಳ ಒಳಗೆ ಚಾರ್ಜ್ಶೀಟ್ : ಕಮಲ್ ಪಂತ್