ಬೆಂಗಳೂರು: ಕಷ್ಟದಲ್ಲಿದ್ದಾಗ ಕೆಲಸ ಕೊಟ್ಟು ಕೈಹಿಡಿದ ಮಾಲೀಕನ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಟಿ ಮಾರ್ಕೆಟ್ನ ಬಿ.ಕೆ.ಅಯ್ಯಂಗಾರ್ ರೋಡ್ನಲ್ಲಿ ಜಯಚಂದ್ರ ಎಂಬುವವರಿಗೆ ಸೇರಿದ ಮರುಧರ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಮೂಲದ ಗಣೇಶ್ ವರ್ಮಾ ಎಂಬಾತನನ್ನು ಬಂಧಿಸಿ, 27 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಎಲೆಕ್ಟ್ರಿಕಲ್ ಶಾಪ್ನಲ್ಲಿ ಗಣೇಶ್ ವರ್ಮಾ ಸೇರಿ ನಾಲ್ವರು ಕೆಲಸ ಮಾಡುತ್ತಿದ್ದರು. ರಾಜಸ್ಥಾನ ಮೂಲದ ಗಣೇಶ್ ಐದಾರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಮಾಲೀಕ ಇಲ್ಲದಿರುವ ಟೈಮ್ ನೋಡಿ ಅಂಗಡಿಯಲ್ಲಿದ್ದ 30 ಲಕ್ಷ ರೂಪಾಯಿ ಹಣ ದೋಚಿ ಕಣ್ಮರೆಯಾಗಿದ್ದ.
ಬಳಿಕ ಅಂಗಡಿಯಲ್ಲಿ ಬಂದು ನೋಡಿದಾಗ ಮಾಲೀಕನಿಗೆ ಹಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ಅನುಮಾನದಿಂದಲೇ ಗಣೇಶ್ಗೆ ಕರೆ ಮಾಡಿದಾಗ ಪೋನ್ ಸ್ವಿಚ್ಡ್ ಆಫ್ ಎಂದು ಬಂದಿತ್ತು. ಆತನ ಮಲ್ಲೇಶ್ವರದ ನಿವಾಸಕ್ಕೂ ಹೋಗಿ ಪರಿಶೀಲಿಸುವಷ್ಟರಲ್ಲಿ ಆತ ಮನೆ ತೊರೆದಿದ್ದ.
ಇದನ್ನೂ ಓದಿ: ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ: ಪ್ರಮುಖ ಆರೋಪಿ ಪೊಲೀಸರ ವಶಕ್ಕೆ!
ಈ ಸಂಬಂಧ ಅಂಗಡಿ ಮಾಲೀಕರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಸಾಲ ತೀರಿಸಲು ಹಾಗೂ ಕೌಟುಂಬಿಕ ಕಾರಣಕ್ಕಾಗಿ ಹಣ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.