ಬೆಂಗಳೂರು : ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ವೃದ್ಧೆಯ ಮೇಲೆ ಹಲ್ಲೆ ಮಾಡಿ ಕೈ-ಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿಯ ಉಳ್ಳಾಲದಲ್ಲಿ ವಾಸವಾಗಿದ್ದ 71 ವರ್ಷದ ಶಾಂತಮ್ಮ ಮನೆಗೆ ವ್ಯಕ್ತಿಯೋರ್ವ ಫೆಬ್ರವರಿ 7ರಂದು ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ್ದಾನೆ ಎಂದು ದೂರು ದಾಖಲಾಗಿತ್ತು.
ದೂರಿನ ಮೇರೆಗೆ ಆರೋಪಿ ಕಿರಣ್ ಕುಮಾರ್‌ನನ್ನು ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಉಳ್ಳಾಲದಲ್ಲಿ ಶಾಂತಮ್ಮ ಮತ್ತು ಸತ್ಯನಾರಾಯಣ ದಂಪತಿ ವಾಸವಾಗಿದ್ದರು. ಶಾಂತಮ್ಮ ಆನೇಕಲ್ನ ಹೆಲ್ತ್ ಅಸಿಸ್ಟೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 9 ವರ್ಷದ ಹಿಂದೆ ನಿವೃತ್ತರಾಗಿದ್ದರು.
ಪತಿ ಸತ್ಯನಾರಾಯಣ ಕೂಡ ಮುಳಬಾಗಿಲಿನಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿ 15 ವರ್ಷದ ಹಿಂದೆ ನಿವೃತ್ತಿಯಾಗಿದ್ದರು. ಇವರು ಹೆಚ್ಚಾಗಿ ಚಿನ್ನಾಭರಣ ಹಾಕಿಕೊಂಡವರಲ್ಲ.
ನಿವೃತ್ತರಾದ ಮೇಲೆ ಬಂದ ಪಿಂಚಣಿ ಹಣದಲ್ಲಿ ಆರು ಬಳೆ, ಕಿವಿಯೋಲೆ ಮತ್ತು ಚಿನ್ನದ ಸರವನ್ನು ಪತ್ನಿ ಶಾಂತಮ್ಮರಿಗೆ ಕೊಡಿಸಿದ್ದರು. ಒಟ್ಟು 175 ಗ್ರಾಂ ಚಿನ್ನ ಇವರ ಬಳಿಯಿತ್ತು. ಇನ್ನೂ ದಂಪತಿಗೆ ಓರ್ಮ ಮಗ ಮತ್ತು ಮಗಳಿದ್ದಾಳೆ. ಮಗ ಕದಿರೇನಹಳ್ಳಿಯಲ್ಲಿ ವಾಸವಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಆರೋಪಿ ಕಿರಣ್ ಬಾಡಿಗೆ ಮನೆ ಬೇಕಾಗಿದೆ ಎಂದು ಕೇಳಿಕೊಂಡು ಬಂದಿದ್ದ. ಮನೆಯಲ್ಲಿ ಒಂಟಿ ವೃದ್ಧೆಯನ್ನು ಗಮನಿಸಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಫೆಬ್ರುವರಿ 7ರಂದು ಮನೆ ಹತ್ತಿರ ಬಂದಿದ್ದ.
ಬಳಿಕ ಮನೆ ಒಡತಿ ಶಾಂತಮ್ಮ ಮನೆ ತೋರಿಸುತ್ತಿದ್ದಂತೆ ಅವರನ್ನು ಗೋಡೆಗೆ ತಳ್ಳಿ ಬೀಳಿಸಿ ಹಗ್ಗದಿಂದ ಕೈಗಳಿಗೆ ಕಟ್ಟಿದ್ದಾನೆ. ಎಷ್ಟೇ ಜೋರಾಗಿ ಕೂಗಿಕೊಂಡರೂ ಅಕ್ಕಪಕ್ಕದವರ್ಯಾರಿಗೂ ಕೇಳಿಸಿಲ್ಲ. ಮೈಮೇಲಿದ್ದ 6 ಬಳೆ, ಚಿನ್ನದ ಸರ, ಕಿವಿಯೋಲೆ ಕದ್ದು ಪರಾರಿಯಾಗಿದ್ಧ.
ಇದನ್ನೂ ಓದಿ: ಔಷಧಿ ಕೊಡಿಸುವುದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ವಕೀಲ ಅರೆಸ್ಟ್
ವೃದ್ಧೆ ಕೊಟ್ಟ ಮಾಹಿತಿ ಮೇರೆಗೆ ರೇಖಾಚಿತ್ರ ರಚಿಸಿಕೊಂಡಿದ್ದ ಪೊಲೀಸರು, ಆ ರೇಖಾಚಿತ್ರದ ಆಧಾರದ ಮೇಲೆ ಸುತ್ತಮುತ್ತಲ ಏರಿಯಾದಲ್ಲಿ ಹುಡುಕಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಳಿಯಿಂದ 9 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ.