ಬೆಂಗಳೂರು: ಬಿಜೆಪಿ ಶಾಸಕ ರವಿಸುಬ್ರಮಣ್ಯ ಲಸಿಕೆ ಹಂಚಿಕೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ಕಮೀಷನ್ ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರಿಗೆ ವಿಚಾರಣೆ ಹಾಜರಾಗುವಂತೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ಕೊರೊನಾ ವ್ಯಾಕ್ಸಿನ್‌ಗೆ ಖಾಸಗಿ ಆಸ್ಪತ್ರೆ ಹೆಚ್ಚು ಹಣ ವಿಧಿಸಿದೆ. ಜನರಿಂದ ಪಡೆದ ಹೆಚ್ಚುವರಿ ಹಣವನ್ನು ಶಾಸಕ ರವಿಸುಬ್ರಮಣ್ಯ ಅವರಿಗೆ ನೀಡಬೇಕು ಎಂಬ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಂದಿಗೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಮಾತನಾಡಿದ ಆಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿತ್ತು.
ಓದಿ-Audio viral: ಖಾಸಗಿ ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ: ಹವ್ಯಾಸಿ ಕಲಾವಿದರು ಮಾಡಿದ ಆಡಿಯೋ ಎಂದು ವ್ಯಂಗ್ಯ
ಆಡಿಯೊ ವೈರಲ್ ಆಗುತ್ತಿದ್ದಂತೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ನಮ್ಮ ಸಿಬ್ಬಂದಿ ಯಾರೊಂದಿಗೂ ಶಾಸಕರಿಗೆ ಹಣ ನೀಡಬೇಕೆಂಬ ವಿಚಾರದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇನ್ನೊಂದೆಡೆ ಇಮೇಲ್ ಮುಖಾಂತರ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದ ವೆಂಕಟೇಶ್ ಅವರಿಗೆ ಗಿರಿನಗರ ಪೊಲೀಸರು ಹೆಚ್ಚುವರಿ ಮಾಹಿತಿಗಾಗಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದಾರೆ.
ಓದಿ-ಸರ್ಕಾರದ ಲಸಿಕೆ ಮಾರಾಟಕ್ಕಾಗಿ ಕಮಿಷನ್ ಅಪವಾದ: ಆರೋಪ ತಳ್ಳಿ ಹಾಕಿದ ಶಾಸಕರಿಂದ ತಿರುಗೇಟು
ಆಡಿಯೊ ಕರೆಯಲ್ಲಿ ಏನಿತ್ತು?
ದೂರವಾಣಿ ಕರೆಯ ಮೂಲಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಬಗ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ ವಿಚಾರಿಸಿದಾಗ, ಆ ಮಹಿಳೆಯು ವ್ಯಾಕ್ಸಿನ್ ಪಡೆಯಲು 900 ರೂ. ನೀಡಬೇಕು ಎಂದು ತಿಳಿಸಿದ್ದರು. ದರ ಹೆಚ್ಚಾಯಿತು ಕಡಿಮೆ ಮಾಡಿ ಎಂದು ಕೇಳಿದಾಗ, ಆಸ್ಪತ್ರೆ ಸಿಬ್ಬಂದಿ ಇಲ್ಲ 900 ರೂ. ಕೊಡಲೇಬೇಕು. ಈ ಮೊತ್ತದಲ್ಲಿ ಶಾಸಕ ರವಿಸುಬ್ರಹ್ಮಣ್ಯ ಅವರಿಗೆ 700 ರೂ. ಹೋಗಲಿದ್ದು ಇನ್ನುಳಿದ 200 ರೂ. ಆಸ್ಪತ್ರೆ ಪಡೆಯಲಿದೆ ಎಂದು ಆಕೆ ಹೇಳಿದ್ದಳು. ಈ ಆಡಿಯೊ ವೈರಲ್ ಆಗಿತ್ತು.