ಬೆಂಗಳೂರು : ಬಿಡಿಎನಲ್ಲಿ ಕಾರ್ಯನಿರ್ವಹಿಸುತ್ತಿದ್ದ 9 ಮಂದಿ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಶೋಧನೆಯನ್ನು ಚುರುಕುಗೊಳಿಸಿದ್ದಾರೆ.
ನಗರದ ವಿವಿಧ ಕಡೆಗಳಲ್ಲಿ ವಾಸವಾಗಿರುವ ಐಷಾರಾಮಿ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಮಧ್ಯವರ್ತಿಗಳ ಆಸ್ತಿ ಕಂಡು ಶಾಕ್ ಆಗಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದೆ.
ಕಳೆದ ವರ್ಷ ಬಿಡಿಎ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಕೆಲ ಕಡತಗಳು ನಾಪತ್ತೆಯಾಗಿರುವುದನ್ನು ಕಂಡುಕೊಂಡಿದ್ದರು. ತನಿಖೆ ನಡೆಸಿದಾಗ ಬ್ರೋಕರ್ಗಳ ಮನೆಯಲ್ಲಿ ದಾಖಲಾತಿ ಇರಬಹುದೆಂಬ ಅಧಿಕಾರಿಗಳು ಶಂಕೆ ಮೇರೆಗೆ 9 ಮಂದಿ ಬ್ರೋಕರ್ಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
8 ಕೋಟಿ ರೂ.ಐಷಾರಾಮಿ ಬಂಗಲೆಯಲ್ಲಿ 10 ಸಾವಿರ ಪತ್ತೆ..: ಬಿಡಿಎ ಏಜೆಂಟ್ ಆಗಿರುವ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಒಂದು ಕ್ಷಣ ಅಧಿಕಾರಿಗಳೇ ದಂಗಾಗಿದ್ದಾರೆ. ಬಂಗಲೆಯಂತಹ ಐಷರಾಮಿ ಮನೆಯೊಳಗೆ ಸಿಮ್ಮಿಂಗ್ ಪುಲ್, ದುಬಾರಿಗೆ ಗ್ರಾನೈಟ್, ಪೀಠೋಪರಣಗಳು ಹಾಗೂ ಹೋಮ್ ಥಿಯೇಟರ್ ಇರುವುದು ಗೊತ್ತಾಗಿದೆ.
8 ಕೋಟಿಯ ಐಷಾರಾಮಿ ಬಂಗಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ ನಗದು ಕೇವಲ ₹10 ಸಾವಿರ. ಮೈಮೇಲಿರುವ ಚಿನ್ನಾಭರಣ ಮತ್ತು ದೇವರಮನೆಯ ಬೆಳ್ಳಿ ಬಿಟ್ರೆ ಒಂದೇ ಒಂದು ಉಂಗುರ ಕೂಡ ಮುನಿರತ್ನ ಮನೆಯಲ್ಲಿ ಪತ್ತೆಯಾಗಿಲ್ಲ. ಆದ್ರೆ, ಬಿಡಿಎ ಮತ್ತು ಆಸ್ತಿ ಪತ್ರಗಳು ಕಾರ್ನಲ್ಲಿ ಪತ್ತೆಯಾಗಿದೆ. ಕಾರ್ ಕೀ ಕೊಡಲು ಮುನಿರತ್ನ ನಕಾರ ಮಾಡಿದ್ದರು. ಕೊನೆಗೆ ಕೀ ಪಡೆದು ಕಾರ್ನಲ್ಲಿದ್ದ ದಾಖಲೆಯನ್ನ ಸೀಜ್ ಮಾಡಿದ್ದಾರೆ.
ಎಸಿಬಿ ಅಧಿಕಾರಿಗಳಿಗೆ ಮನೆ ನೋಡಿ ಶಾಕ್ ಆಗಿದ್ದು. ನಗದು, ಚಿನ್ನಾಭರಣ ಅಬೇಸ್ ಮಾಡಿಸಿರುವ ಗುಮಾನಿಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮನೆಯ ಮೂಲೆ ಮೂಲೆ, ಇಂಚಿಂಚು ತಡಕಾಡಿದ್ರೂ ಈವರೆಗೆ ಏನೂ ಸಿಕ್ಕಿಲ್ಲ. ಇನ್ನೂ ಮನೆಯ ಪೈಪ್ ಲೇನ್ಗಳಲ್ಲೂ ತಪಾಸಣೆ ಮುಂದುವರಿಸಿದ್ದಾರೆ.
ಜೆರಾಕ್ಸ್ ಅಂಗಡಿ ತೆರೆದಿದ್ದ ತೇಜಸ್ವಿ ಕೋಟಿ ಬೆಲೆ ಬಂಗಲೆ ಮಾಲೀಕ : ಬಿಡಿಎ ಬ್ರೋಕರ್ ತೇಜಸ್ಚಿ ಶುರು ಮಾಡಿದ್ದು ಜೆರಾಕ್ಸ್ ಅಂಗಡಿ. ದ್ವಿತೀಯ ಪಿಯುಸಿ ಮುಗಿಸಿ ಜೆರಾಕ್ಸ್ ಅಂಗಡಿ ಶುರು ಮಾಡಿದ್ದರು. ಆದರೆ, ಈಗ ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕರಾಗಿದ್ದಾರೆ. ಆರ್ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯವರದ್ದು ಎನ್ನಲಾಗಿದೆ. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿಗೆ ಬಂಗಲೆ ಖರೀದಿಸಿದ್ದರು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಬಿಡಿಎ ಅಧಿಕಾರಿ ಜೊತೆ ಸೇರಿ ಭ್ರಷ್ಟಚಾರ ಆರೋಪ.. ಮಧ್ಯವರ್ತಿ, ಏಜೆಂಟ್ ಮನೆ - ಕಚೇರಿ ಮೇಲೆ ಎಸಿಬಿ ದಾಳಿ!