ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಹೇಳಿದರು.
ಈತ ತಿಲಕ್ ನಗರ ನಿವಾಸಿಯಾಗಿದ್ದು, ಕೆಲ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಹೀಗಾಗಿ ಕೆಲ ವರ್ಷಗಳಿದ ಡಯಾಲಿಸೀಸ್ ಮಾಡಲಾಗುತ್ತಿತ್ತು. ಆದರೆ, ಏ.24ರಂದು ಆತನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ವಿಕ್ಟೋರಿಯಾದ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿಸಿದರು.
ಇಂದು ಬೆಳಗ್ಗೆ 8.30-9 ಗಂಟೆಯ ನಡುವಿನ ಸಮಯದಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿ.ವಿ. ಪುರಂ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಹಾಗೆಯೇ ವಿಕ್ಟೋರಿಯಾ ಆಸ್ಪತ್ರೆಯಿಂದಲೂ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ರು.
ಆಸ್ಪತ್ರೆಯ ತನಿಖೆ ಕುರಿತು ನಮಗೆ ವರದಿ ಬರಲಿದೆ. ವರದಿ ಬಂದ ನಂತರ ಪರಿಶೀಲನೆ ನಡೆಸಲಿದ್ದೇವೆ. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವಾರ್ಡ್ಗೆ ವೈದ್ಯರು, ನರ್ಸ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಮಾತ್ರ ಒಳಗೆ ಪ್ರವೇಶ ಇದೆ ಎಂದು ಹೇಳಿದರು.
ಐಸೋಲೇಟೆಡ್ ವಾರ್ಡ್ ಮತ್ತು ಘಟನೆ ಜಾಗದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವಂತೆ ಸೂಚಿಸಿದ್ದೇನೆ. ಯಾರ ನಿರ್ಲಕ್ಷ್ಯ ಎನ್ನುವುದರ ಕುರಿತು ತನಿಖೆ ನಡೆಸಲಾಗುವುದು ಎಂದು ಡಿಸಿಪಿ ರೋಹಿಣಿ ತಿಳಿಸಿದರು.