ಬೆಂಗಳೂರು: ಯಶವಂತಪುರದ ತ್ರಿವೇಣಿ ರಸ್ತೆ ಬಳಿ ಇರುವ ಕಸದ ರಾಶಿಗೆ ನವಜಾತ ಶಿಶುವನ್ನು ಮಹಿಳೆಯೊಬ್ಬಳು ಎಸೆದು ಹೋಗಿದ್ದಾಳೆ. ಈ ನವಜಾತ ಶಿಶುವನ್ನು ನೋಡಿದ ಆಟೋ ಚಾಲಕನೊಬ್ಬ ಅದನ್ನು ರಕ್ಷಿಸಿದ್ದಾರೆ.
ಕಸದ ರಾಶಿಯಲ್ಲಿ ಬಿದ್ದಿದ್ದ ಮಗುವಿನ ಮೇಲೆ ಐದಾರು ನಾಯಿಗಳು ದಾಳಿ ನಡೆಸಿದ್ದು, ಇದೇ ವೇಳೆ ಹಾಲು ತರಲು ಹೋಗುತ್ತಿದ್ದ ಆಟೋ ಚಾಲಕರೊಬ್ಬರು ಮಗುವನ್ನ ರಕ್ಷಿಸಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿದ್ದ ಅದನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಕೂಡಲೇ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ, ದೂರು ನೀಡಿದ್ದಾರೆ.
ಡ್ರೈವರ್ ಸಮಯಪ್ರಜ್ಞೆಗೆ ವೈದ್ಯರು ಮತ್ತು ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆ ಘಟನೆ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬಳು ಮಗುವನ್ನ ಬಿಸಾಕಿ ಹೋಗಿರೋದು ಸೆರೆಯಾಗಿದೆ. ಆಕೆಯ ಪತ್ತೆ ಕಾರ್ಯ ಮುಂದುವರಿದಿದೆ.
ಈಟಿವಿ ಭಾರತನೊಂದಿಗೆ ಮಾತನಾಡಿರುವ ಆಟೋ ಚಾಲಕ ಇಂತಹ ನೀಚ ಕೃತ್ಯವೆಸಗಿರುವ ಮಹಿಳೆ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.