ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ ₹4.85 ಲಕ್ಷ ಬೀದಿ ದೀಪಗಳಿವೆ. ಅವುಗಳ ನಿರ್ವಹಣೆಗೆ ಬಿಬಿಎಂಪಿ ವಾರ್ಷಿಕ ₹250 ಕೋಟಿ ವ್ಯಯಿಸುತ್ತಿದೆ. ಇಷ್ಟಾದ್ರೂ ನಗರದ ಪ್ರಮುಖ ಮೇಲ್ಸೇತುವೆಗಳಲ್ಲೇ ಕೆಲ ವಿದ್ಯುತ್ ದೀಪಗಳೇ ಉರಿಯಲ್ಲ. ಕೆಲ ರಸ್ತೆಗಳಲ್ಲಿ ಬೆಳಕೇ ಸಾಲಲ್ಲ. ಇತ್ತ ಕೆಟ್ಟಿರುವ ಬೀದಿ ದೀಪಗಳನ್ನು ತಿಂಗಳಾದ್ರೂ ಸರಿಪಡಿಸುವ ಗೋಜಿಗೇ ಹೋಗಿಲ್ಲ. ಕೆಲ ಕಡೆ ಬೆಳ್ಳಂಬೆಳಗ್ಗೆ ಉರಿಯುತ್ತಿರುತ್ತವೆ. ಇದು ಗುತ್ತಿಗೆದಾರರ ನಿರ್ಲಕ್ಷ್ಯ ಸೂಚಿಸುತ್ತದೆ.
ಈ ಹಿನ್ನೆಲೆ ಉತ್ತಮ ಯೋಜನೆ ರೂಪಿಸಿದ್ದ ಬಿಬಿಎಂಪಿ, ವಿದ್ಯುತ್ ಉಳಿತಾಯ ಹಾಗೂ ಕಡಿಮೆ ಖರ್ಚು ಮಾಡಲು ನಗರಾದ್ಯಂತ ಎಲ್‌ಇಡಿ ಬೀದಿದೀಪ ಅಳವಡಿಕೆಗೆ ಗ್ಲೋಬಲ್ ಟೆಂಡರ್ ಕರೆದಿತ್ತು. ಪಿಪಿಪಿ ಮಾದರಿಯಡಿ ಗುತ್ತಿಗೆ ಸಂಸ್ಥೆಯೇ ಎಲ್‌ಇಡಿ ದೀಪ ಅಳವಡಿಸಿ, ಹತ್ತು ವರ್ಷ ನಿರ್ವಹಣೆಯ ಹೊಣೆ ಹೊಂದಿತ್ತು. ಆದರೆ, 2018ರಲ್ಲಿ ಈ ಟೆಂಡರ್ಗೆ ಕಾರ್ಯಾದೇಶ ನೀಡಿದ್ದರೂ ಈವರೆಗೂ ಆರಂಭ ಮಾಡಿಲ್ಲ. ಇದು ಹಲವು ಪಾಲಿಕೆ ಸದಸ್ಯರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಟೆಂಡರ್ ರದ್ದುಪಡಿಸುವಂತೆ ಕೌನ್ಸಿಲ್ ಸಭೆಗಳಲ್ಲಿ ಒತ್ತಾಯವನ್ನೂ ಮಾಡಿದ್ದರು. ಒತ್ತಡ ಹೆಚ್ಚಾದ ಪರಿಣಾಮ ಈ ಸೆಪ್ಟೆಂಬರ್ನಲ್ಲಿ ಟೆಂಡರ್ದಾರರು ಕೆಲಸ ಪ್ರಾರಂಭಿಸಿದ್ದಾರೆ.
ಆಮೆಗತಿಯಲ್ಲಿ ಕಾಮಗಾರಿ : ಆರ್‌ಆರ್‌ನಗರ ವಲಯದ ಕೆಲ ವಾರ್ಡ್ಗಳಲ್ಲಿ ಹಾಗೂ ದಾಸರಹಳ್ಳಿ ವಲಯದ ಒಂದು ವಾರ್ಡ್ನಲ್ಲಿ ಸರ್ವೇ ಕಾರ್ಯ ಆರಂಭಿಸಲಾಗಿದೆ. ಈಗಿರುವ ವಿದ್ಯುತ್ ಕಂಬಗಳಿಗೇ ಎಲ್‌ಇಡಿ ಅಳವಡಿಸುವುದು, ಯಾವ ರಸ್ತೆಗೆ ಎಷ್ಟು ಪ್ರಮಾಣದ ಬೆಳಕು ಬೇಕು ಎಂದು ಸಮೀಕ್ಷೆ ನಡೆಸಿ ಆ ಪ್ರಕಾರ ಬೀದಿ ದೀಪಗಳ ಅಳವಡಿಕೆ ಮಾಡಲಿದ್ದಾರೆ. ಆದರೆ, ಗುತ್ತಿಗೆ ಅವಧಿ ಪ್ರಕಾರ 198 ವಾರ್ಡ್ಗಳಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಸಲು 30 ತಿಂಗಳ ಕಾಲಾವಕಾಶ ನೀಡಲಾಗಿತ್ತು. 2018ರಲ್ಲಿ ಆರಂಭವಾದ್ರೆ 2021ರಲ್ಲಿ ಮುಗಿಯುತ್ತಿತ್ತು. ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಕಾರಣ ಮುಗಿಯಲು ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತದೋ ಎಂಬ ಟೀಕೆ ಮಾಜಿ ಪಾಲಿಕೆ ಸದಸ್ಯರಿಂದ ಕೇಳಿ ಬಂದಿದೆ.
ಕಡತಕ್ಕೆ ಸಹಿ ಬಿದ್ದಿಲ್ಲ : ನಾವು 2,000 ಮಂದಿ ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ಯಾವುದೋ ಮುಂಬೈ ನಗರದ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ. ಕೊನೆಪಕ್ಷ ಎಲ್ಲಾ ಕಡೆ ಎಲ್‌ಇಡಿ ಅಳವಡಿಸುವವರೆಗಾದ್ರೂ ನಮ್ಮ ಟೆಂಡರ್ ಮುಂದುವರಿಸಬಹುದಿತ್ತು. ಆದರೆ, ಒಂದೆರಡು ವಾರ್ಡ್ಗಳಿಗೆ ಕಾರ್ಯಾದೇಶ ಕೊಟ್ಟಿದ್ದಾರೆ. ಬಿಟ್ಟರೆ, ಬೇರೆ ವಾರ್ಡ್ಗಳ ಕಡತಕ್ಕೆ ಇನ್ನೂ ಸಹಿ ಬಿದ್ದಿಲ್ಲ ಎಂದು ಗುತ್ತಿಗೆದಾರರಾದ ರಾಜು ಈಟಿವಿ ಭಾರತಕ್ಕೆ ತಿಳಿಸಿದರು.
ನಾಲ್ಕು ಕೋಟಿಗೆ ಇಳಿಸಬಹುದು : ಈಗಿರುವ ಸುಮಾರು 4.8 ಲಕ್ಷ ವಿದ್ಯುತ್ ದೀಪಗಳಿಂದ ತಿಂಗಳಿಗೆ ₹18 ಕೋಟಿ, ವರ್ಷಕ್ಕೆ ₹200 ಕೋಟಿ ಹಾಗೂ ನಿರ್ವಹಣೆಗೆ ವಾರ್ಷಿಕ ₹50 ಕೋಟಿ ವೆಚ್ಚವಾಗುತ್ತಿದೆ. ಎಲ್ಇಡಿಯ ಒಂದು ದೀಪಕ್ಕೆ 10 ಸಾವಿರ ವೆಚ್ಚವಾಗಲಿದ್ದು, ಒಟ್ಟು ಯೋಜನೆ ವೆಚ್ಚ ₹560 ಕೋಟಿ ಆಗಿದೆ. ಈಗಿರುವ ವಿದ್ಯುತ್ ಬಲ್ಬ್ಗಳು 250 ವ್ಯಾಟ್ಸ್‌ನದ್ದಾಗಿದ್ದು, ಅದನ್ನು ಎಲ್ಇಡಿಯ 90 ವ್ಯಾಟ್ಸ್ಗೆ ಬದಲಿಸಿದ್ರೆ ವಿದ್ಯುತ್ ಉಳಿತಾಯ ಮಾಡಬಹುದು. ಈಗಿರುವ ಬಲ್ಬ್ಗಳಿಗೆ ಮೂರು ಯೂನಿಟ್ ವಿದ್ಯುತ್ ಬೇಕಾದ್ರೆ ಎಲ್ಇಡಿಗೆ ಒಂದು ಯೂನಿಟ್ ಸಾಕು. ಹೀಗಾಗಿ, ತಿಂಗಳಿಗೆ ಬೀಳುವ ₹12 ಕೋಟಿ ವೆಚ್ಚವನ್ನು, ನಾಲ್ಕು ಕೋಟಿಗೆ ಇಳಿಸಬಹುದು ಎಂಬುದು ಪಾಲಿಕೆಯ ಯೋಜನೆ.
ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು : ಯೋಜನೆ ವಿಳಂಬದ ಬಗ್ಗೆ ಕಿಡಿಕಾರಿದ ಮಾಜಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ, ಈಗಾಗಲೇ ನಗರದಲ್ಲಿ ಶೇ.70ರಷ್ಟು ಎಲ್‌ಇಡಿ ಇದೆ. ಉಳಿದ ಕಡೆಯೂ ಕೇಂದ್ರದ 14ನೇ ಹಣಕಾಸು ಯೋಜನೆ ವಿದ್ಯುತ್ ದೀಪಗಳ ಅನುದಾನ ಬಳಸಿಕೊಳ್ಳಬಹುದು. ಅಧಿಕಾರಿಗಳು ಅದಕ್ಕೆ ಅವಕಾಶ ಕೊಡದೆ ಈ ಹಣವನ್ನು ಅನ್ಯ ಯೋಜನೆಗೆ ಬಳಸಿಕೊಂಡಿದ್ದಾರೆ. ಈಗ ನಮ್ಮ ಅನುದಾನದ ಬಲ್ಬ್ ಕೂಡ ಇಲ್ಲ, ಗ್ಲೋಬಲ್ ಟೆಂಡರ್‌ನ ಬೀದಿದೀಪಗಳೂ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದರು. ಕೌನ್ಸಿಲ್ನಲ್ಲಿ ಎಷ್ಟೇ ಬಾರಿ ವಿಷಯ ಪ್ರಸ್ತಾಪಿಸಿ, ಟೆಂಡರ್ ರದ್ದುಪಡಿಸುವಂತೆ ಕೇಳಿದ್ರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದರು.
ಈ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ವಿಚಾರಿಸಿದ್ರೆ, ಗ್ಲೋಬಲ್ ಟೆಂಡರ್‌ನ ರದ್ದುಪಡಿಸಿಲ್ಲ. ಈಗಾಗಲೇ ಸರ್ವೇ ಕಾರ್ಯ ಆರಂಭಿಸಲಾಗಿದೆ. ಕಾಮಗಾರಿ ಪ್ರಗತಿ ಬಗ್ಗೆ ತಿಳಿದುಕೊಂಡು ಹೇಳಲಾಗುವುದು ಎಂದರು. ಪಾದಾಚಾರಿಗಳು, ವಾಹನ ಸವಾರರು ನಿರ್ಭೀತಿಯಿಂದ ಉತ್ತಮ ಗುಣಮಟ್ಟದ ಬೆಳಕಿನಲ್ಲಿ ನಗರದಲ್ಲೆಡೆ ಓಡಾಡುವ ಕನಸು ನನಸಾಗಲು ಇನ್ನೂ ವರ್ಷಗಳೇ ಬೇಕಾಗಿದೆ.