ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಅಗತ್ಯ ಸೇವೆಗಳಿಗೆ ಮಾತ್ರ ವಾಹನಗಳ ಸಂಚಾರಕ್ಕೆ ಪೊಲೀಸ್ ಇಲಾಖೆ ಇಂಬು ಕೊಟ್ಟಿತ್ತು. ಆದರೆ ಇದೀಗ ಸಿಲಿಕಾನ್ ಸಿಟಿ ಪೊಲೀಸರ ಮೇಲೆ ಕೆಲ ಆರೋಪಗಳು ಕೇಳಿಬಂದಿವೆ. ಮೆಡಿಕಲ್ ಎಮರ್ಜೆನ್ಸಿಗೆಂದು ತೆರಳುತ್ತಿದ್ದ ವ್ಯಕ್ತಿಗಳನ್ನ ಪೊಲೀಸರು ತಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳು ನಗರದಲ್ಲಿ ಬೆಳಕಿಗೆ ಬಂದಿವೆ.
ಮುಬಾರಕ್ ಎಂಬುವರು ತನ್ನ ಪತ್ನಿಗೆ ಕಿಡ್ನಿ ಸಮಸ್ಯೆ ಇರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೀಗಾಗಿ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿದ್ದ ಪತ್ನಿಗೆ ಊಟ ಕೊಟ್ಟು ವಿಕ್ಟೋರಿಯಾದಿಂದ ವಿಲ್ಸನ್ ಗಾರ್ಡನ್ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ದಾಖಲೆ ತೋರಿಸಿ ಅಂಗಲಾಚಿದ್ರೂ ಬಿಡಲಿಲ್ಲವೆಂದು ಮುಬಾರಕ್ ಆರೋಪಿಸಿದ್ದಾರೆ. ವೈದ್ಯರು ಕೂಡ ಮೆಡಿಕಲ್ ಎಮರ್ಜೆನ್ಸಿ ಇದ್ದ ಹಿನ್ನೆಲೆ ಒಂದು ಲೆಟರ್ ಕೊಟ್ಟಿದ್ದಾರೆ. ಮೆಡಿಕಲ್ ಡಾಕ್ಯುಮೆಂಟ್ ಕೂಡ ಇದ್ದರೂ ವಾಹನ ಸೀಜ್ ಮಾಡಲಾಗಿದೆ ಎಂದು ಮುಬಾರಕ್ ಅಳಲು ತೋಡಿಕೊಂಡಿದ್ದಾರೆ.
ಇತ್ತ ತಿಲಕ್ ನಗರ ಪೊಲೀಸ್ ಸಿಬ್ಬಂದಿ ಕೂಡ ಇದೇ ರೀತಿ ಮಾಡಿರುವ ಆರೋಪ ಕೇಳಿ ಬಂದಿದೆ. ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಔಷಧಿ ತರಲು ಮಗುವಿನ ಸಂಬಂಧಿ ಸಲ್ಮಾನ್ ತೆರಳಿದ್ದರು. ಈ ವೇಳೆ ಔಷಧಿ ತೆಗೆದುಕೊಂಡು ವಾಪಸ್ ಬರುವಾಗ ತಿಲಕ್ ನಗರದ ಅಪೋಲೊ ಆಸ್ಪತ್ರೆ ಬಳಿ ವಾಹನ ಜಪ್ತಿ ಮಾಡಿದ್ದಾರೆ. ಮಗುವಿಗೆ ಇಂಜೆಕ್ಷನ್ ತಲುಪಿಸುವುದು ಅಗತ್ಯವಿದ್ದ ಕಾರಣ ಪೊಲೀಸರ ಜತೆ ವಾದ ಮಾಡಿ ಸಮಯ ವ್ಯರ್ಥ ಮಾಡದೇ ಓಡಿ ಹೋಗಿ ಔಷಧಿ ತಲುಪಿಸಿದ್ದಾರೆ. ಸದ್ಯ ಈ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಗತ್ಯ ಸೇವೆಗೆ ತೆರಳಿದ ಕಾರಣ ಇಬ್ಬರ ವಾಹನಗಳನ್ನು ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ.