ನೆಲಮಂಗಲ: ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರೊಬ್ಬರು ಕುಟುಂಬ ನಿರ್ವಹಣೆಗೆ ಮಾಡಿದ ಸಾಲ ತೀರಿಸಲಾಗದೇ ಮನನೊಂದು ಇಡೀ ಕುಟುಂಬಸ್ಥರಿಗೆ ವಿಷ ಉಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾಸರಹಳ್ಳಿಯ ಬಾಗಲುಕುಂಟೆಯಲ್ಲಿ ನಡೆದಿದೆ.
ದಾಸರಹಳ್ಳಿಯ ಬಾಗಲುಕುಂಟೆಯ ಕ್ಯಾಬ್ ಚಾಲಕ ಭಾನುಪ್ರಕಾಶ್ (40) ಹಾಗೂ ಆತನ ಪತ್ನಿ ಗೀತಾ (37) ಮತ್ತು ಮಗಳು ಲೇಖನ (17) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಪತ್ನಿ ಗೀತಾ ಸಾವನ್ನಪ್ಪಿದ್ದಾರೆ. ಗಂಡ ಭಾನುಪ್ರಕಾಶ್ ಮತ್ತು ಮಗಳು ಲೇಖನ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾಬ್ ಚಾಲಕನಾಗಿದ್ದ ಭಾನುಪ್ರಕಾಶ್ಗೆ ಕೊರೊನಾ ಹಿನ್ನೆಲೆ ಕೆಲಸ ಸಿಗುತ್ತಿರಲಿಲ್ಲ. ಕುಟುಂಬ ನಿರ್ವಹಣೆಗಾಗಿ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಸಾಲ ಮಾಡಿದ್ದ. ಜೊತೆಗೆ ಚೀಟಿ ವ್ಯವಹಾರ ಸಹ ಮಾಡುತ್ತಿದ್ದ.
ಚೀಟಿ ಎತ್ತಿ ಹಣ ತೆಗೆದುಕೊಂಡು ಹೋದವರು ಮರಳಿ ಚೀಟಿ ಹಣ ಕಟ್ಟಿರಲಿಲ್ಲ. ಸಾಲ ಕೊಟ್ಟ ಸ್ನೇಹಿತರು ಸಹ ಹಣ ವಾಪಸ್ ನೀಡುವಂತೆ ಕೇಳಿದಾಗ ಮನನೊಂದು ಭಾನುಪ್ರಕಾಶ್, ಹೆಂಡತಿ ಮಗಳಿಗೆ ತಿಳಿದಂತೆ ಹಾಲಿನಲ್ಲಿ ವಿಷ ಬೆರಸಿ ಕೊಟ್ಟಿದ್ದಾನೆ. ಮೂವರು ಹಾಲು ಸೇವನೆ ಮಾಡಿದ್ದಾರೆ. ಈ ಕುರಿತು ಬಾಗಲುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ