ಬೆಂಗಳೂರು: ಮದ್ಯದ ಅಮಲಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯೋರ್ವ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಮಡಿವಾಳ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ. ಕಿಮ್ಸ್ನಲ್ಲಿ ಓದುತ್ತಿರುವ ವಿಜಯ್ ಭಾರದ್ವಾಜ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ನೋಟಿಸ್ ಕೊಟ್ಟು ಕಳುಹಿಸಿದ್ದಾರೆ.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಸರ್ಜಾಪುರ ಜಂಕ್ಷನ್ ಸಮೀಪದ ಬಾರ್‌ನಲ್ಲಿ ಮದ್ಯ ಸೇವಿಸಿದ ಈತ ಬಳಿಕ ಪಾರ್ಕಿಂಗ್ ಸ್ಥಳದಲ್ಲಿ ಕಾರು ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಗುದ್ದಿದ್ದಾನೆ. ದ್ವಿಚಕ್ರ ವಾಹನ ಚಾಲಕ ಹಾಗೂ ಆರೋಪಿಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಸ್ಥಳೀಯರು ಸಮಾಧಾನಪಡಿಸಿ ಕಳುಹಿಸಿದ್ದಾರೆ.
ರಿವರ್ಸ್ ತಗೆಯುವಾಗ ಮತ್ತೆ ಡಿಕ್ಕಿ: ಅನಂತರವೂ ಆರೋಪಿ ಕಾರನ್ನು ಹಿಂದಕ್ಕೆ ತೆಗೆಯುವಾಗ ಮತ್ತೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಆರೋಪಿಯನ್ನು ಮಡಿವಾಳ ಸಂಚಾರ ಠಾಣೆಗೆ ಕರೆದೊಯ್ದು ಪರೀಕ್ಷಿಸಿದಾಗ ಮದ್ಯ ಸೇವಿಸಿರುವುದು ತಿಳಿದುಬಂದಿದೆ. ಕಾರಿಗೆ ಸಂಬಂಧಿಸಿದ ದಾಖಲೆಗಳಾಗಲಿ, ಚಾಲನಾ ಪರವಾನಿಗೆಯಾಗಲಿ ಈತನ ಬಳಿ ಇರಲಿಲ್ಲ. ಹೀಗಾಗಿ, ಕಾರು ಜಪ್ತಿ ಮಾಡಿ, ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ.
ಯುವತಿ ಚುಡಾಯಿಸಿದ ಆರೋಪ: ಈ ಹಿಂದೆ ಆರೋಪಿ ವಿಜಯ್ ಭಾರದ್ವಾಜ್ ವಿರುದ್ಧ ಯುವತಿಗೆ ಚುಡಾಯಿಸಿದ ಆರೋಪವೂ ಇದೆ.
ಇದನ್ನೂ ಓದಿ: ಮನೆಯಿಂದ ಕಾಣೆಯಾಗಿದ್ದ 2 ವರ್ಷದ ಮಗು 24 ಗಂಟೆ ಬಳಿಕ ರಬ್ಬರ್ ತೋಟದಲ್ಲಿ ಪತ್ತೆ