ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಕಾರು ಚಾಲಕನೊಬ್ಬ ಕುಡಿದು ಫುಟ್‌ಪಾತ್ ಮೇಲೆ ಸವಾರಿ ಮಾಡಿದ್ದಾನೆ.
ಹೆಚ್ಎಸ್ಐಆರ್ ಲೇಔಟ್ನ 17 ನೇ ಕ್ರಾಸ್ ಬಳಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಕಾರು ಚಾಲಕ ಫುಟ್‌ಪಾತ್ ಬಳಿಯ ಹೋಟೆಲ್‌ನ ಗ್ರಾಹಕರ ಮೇಲೆ ಕಾರು ಚಲಾಯಿಸಿದ್ದಾನೆ.
ಸರ್ಜಾಪುರ ಮುಖ್ಯ ರಸ್ತೆಯ ರಾಜೇಂದ್ರ ಎಂಬಾತ ಕುಡಿದು ವಾಹನ ಓಡಿಸಿದ ಚಾಲಕ. ಇಂದು ಮಧ್ಯಾಹ್ನ ಬಡಾವಣೆಯ 17 ನೇ ಕ್ರಾಸ್ ಬಳಿ ರೆಡ್ಡಿ ಹೋಟೆಲ್ ಬಳಿ ಗ್ರಾಹಕರು ಊಟಕ್ಕಾಗಿ ಸೇರಿದ್ದರು. ಈ ವೇಳೆ ರಾಜೇಂದ್ರ ರಸ್ತೆ ಬದಲು ಪಾದಚಾರಿ ಮಾರ್ಗದ ಮೇಲೆ ಕಾರು ಹತ್ತಿಸಿದ್ದಾನೆ. ಇದರಿಂದಾಗಿ ಕಾರು ಗುದ್ದಿದ ರಭಸಕ್ಕೆ ಏಳೆಂಟು ಮಂದಿ ಹಾರಿ ಕೆಳಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಗೌರವ್ ಹಾಗೂ ಶಂಕರ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸರು ಚಾಲಕನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.