ಬೆಂಗಳೂರು: ಪ್ರೀತಿಸುವಂತೆ ಕಾಲೇಜು ಯುವತಿಗೆ ಹಿಂಸೆ ಕೊಡುತ್ತಾ, ಸಿನಿಮಾ ದೃಶ್ಯದಂತೆ ಐ ಲವ್ ಯೂ, ಯು ಮಸ್ಟ್ ಲವ್ ಮಿ ಎಂದು ಹೇಳಿ ಹಿಂಸೆ ನೀಡುತ್ತಿದ್ದ ಪಾಗಲ್ ಪ್ರೇಮಿವೋರ್ವನನ್ನು ಚಂದ್ರಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಾಗರಭಾವಿ ನಿವಾಸಿಯಾಗಿರುವ 22 ವರ್ಷದ ಯುವತಿಗೆ ರಾಜೇಶ್ ಎಂಬಾತ ಹಿಂಸೆ ನೀಡುತ್ತಿದ್ದ. ಪ್ರತಿನಿತ್ಯ ಯುವತಿಯನ್ನು ಫಾಲೋ ಮಾಡುತ್ತಿದ್ದ ರಾಜೇಶ್, ಯುವತಿಯ ಸ್ನೇಹಿತರಿಗೆ ಅವಳು ನನ್ನ ಹುಡುಗಿ ಮಾತಾಡಿಸಿದ್ರೆ ಅಷ್ಟೇ ಎಂದು ವಾರ್ನ್ ಮಾಡಿದ್ದ. ಆಕೆಯ ಪೊಷಕರಿಗೂ ಕರೆ ಮಾಡಿ, ನಿಮ್ಮ ಮಗಳನ್ನ ಲವ್ ಮಾಡುತ್ತಿದ್ದೇನೆ, ನಾನೇ ಮದುವೆ ಆಗುತ್ತೇನೆ ಎಂದಿದ್ದನಂತೆ. ಯುವತಿ ಒಪ್ಪದಿದ್ದಾಗ ಬ್ಲೇಡ್ನಲ್ಲಿ ಕೈ ಹಾಗೂ ಕುತ್ತಿಗೆ ಕುಯ್ದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ.
ಜೊತೆಗೆ ನಾನು ಸಾಯೋವಾಗ ನಿಮ್ಮಪ್ಪ ಅಮ್ಮನ ಹೆಸರನ್ನು ಬರೆದಿಡುತ್ತೇನೆ. ಅವರು ಜೈಲಿಗೆ ಹೋಗುತ್ತಾರೆ. ಸುಮ್ಮನೇ ನನ್ನ ಲವ್ ಮಾಡು ಎಂದು ಯುವತಿಗೆ ಡೆಡ್ಲೈನ್ ಕೂಡ ಆರೋಪಿ ಕೊಟ್ಟಿದ್ದ ಎನ್ನಲಾಗ್ತಿದೆ. ಒಂದು ದಿನದ ಒಳಗಾಗಿ ಲವ್ ಪ್ರಪೋಸಲ್ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದನಂತೆ. ಈತನ ಹಿಂಸೆ ತಾಳಲಾರದೇ ಯುವತಿ ಹಾಗೂ ಆಕೆಯ ಪೋಷಕರು ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದರು.
ಸದ್ಯ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಚಂದ್ರಲೇಔಟ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ MIS-C ಸೋಂಕಿಗೆ ಐದು ವರ್ಷದ ಮಗು ಬಲಿ