ಬೆಂಗಳೂರು: ಒಂದೂಕಾಲು ಕೋಟಿಗೂ ಅಧಿಕ ಜನರಿರುವ ನಗರದಲ್ಲಿ ಪಾರದರ್ಶಕತೆ ಹಾಗೂ ಸುರಕ್ಷತೆಗಾಗಿ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚು ಅಪರಾಧಗಳು ಜರುಗುವ ಸಿಲಿಕಾನ್ ಸಿಟಿಯಲ್ಲಿ ಆರೋಪಿಗಳ ಪತ್ತೆಗೆ ಅವುಗಳ ಮೂಲಕ ಹದ್ದಿನ ಕಣ್ಣಿಡಲಾಗಿದ್ದು, ಗೌರಿ ಲಂಕೇಶ್ ಹತ್ಯೆ, ಡಿಜೆ ಹಳ್ಳಿ ಗಲಭೆ ಸೇರಿದಂತೆ ಅದೆಷ್ಟೋ ಪ್ರಕರಣಗಳಿಗೆ ಪರಿಹಾರವಾಗಿವೆ.
ಇದನ್ನೂ ಓದಿ: ನಾಳೆ ನಗರದ 8 ಕಡೆ ನಡೆಯಲಿದೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್: ಎಲ್ಲೆಲ್ಲಿ?
ನಗರದ ಪ್ರತಿ ಜಂಕ್ಷನ್, ಮನೆ, ಅಂಗಡಿ, ಹೋಟೆಲ್, ಮೆಟ್ರೋ-ರೈಲ್ವೆ ನಿಲ್ದಾಣ, ಬಿಎಂಟಿಸಿ ಬಸ್, ಪಾರ್ಕ್, ಗ್ರೌಂಡ್, ಕಚೇರಿ, ಪೊಲೀಸ್ ಠಾಣೆ ಹೀಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳಿದ್ದು, ವಾರದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಪುಡಿ ರೌಡಿಗಳ ಅಟ್ಟಹಾಸ, ಕೊಮು ಗಲಭೆ, ಗಲಾಟೆ, ಸರಗಳ್ಳತನ, ವಾಹನ ಕಳ್ಳತನ, ಮನೆ ದರೋಡೆ, ಅಪಹರಣ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ.
ನಗರದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆಯೇ ಅಳವಡಿಸಿಲ್ಲ.ವಿಐಪಿ, ರಾಜಕಾರಣಿಗಳ ಮನೆಯ ಸುತ್ತಮುತ್ತ, ಸರ್ಕಾರಕ್ಕೆ ಸಂಬಂಧಿಸಿದ ಪ್ರದೇಶ, ಬಿಬಿಎಂಪಿ, ಬಿಡಿಎ ಪ್ರದೇಶಗಳಲ್ಲಿ ಸರ್ಕಾರವೇ ಅಳವಡಿಸಿದೆ. ಖಾಸಗಿ ಕಂಪನಿಗಳು, ಮಾಲ್ಗಳು, ದೊಡ್ಡ ಮಳಿಗೆ, ಚಿನ್ನಾಭರಣ ಅಂಗಡಿಗಳಲ್ಲಿ ಭದ್ರತಾ ದೃಷ್ಟಿಯಿಂದ ಉದ್ಯಮಿಗಳೇ ಸಿಸಿಟಿವಿ ಅಳವಡಿಸಿಕೊಂಡಿರುತ್ತಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹದ್ದಿನ ಕಣ್ಣು: 'ನಿರ್ಭಯಾ ನಿಧಿ'ಯಿಂದ ಬರಲಿವೆ 7,500 ಸಿಸಿಟಿವಿ ಕ್ಯಾಮೆರಾಗಳಿಗಾಗಿ ಮನವಿ!
ಮೆಟ್ರೋನೆಟ್ ಕ್ಯಾಮೆರಾ: ಈ ಕ್ಯಾಮೆರಾದಲ್ಲಿ 151 ಚಿತ್ರಗಳು ಸೆರೆಯಾಗಲಿದ್ದು, 16 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಳವಡಿಸಲಾಗಿದೆ. 360 ಡಿಗ್ರಿ ತಿರುಗುತ್ತಾ, ಸುಮಾರು 500 ಮೀಟರ್ ದೂರವನ್ನು ಸೆರೆಹಿಡಿಯುತ್ತದೆ. ಕೆಲವೆಡೆ ಬುಲೆಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದು ಹೆಚ್ಚು ಜೂಮ್ ಮಾಡುವ ಸಾಮರ್ಥ್ಯ ಹೊಂದಿದೆ.
43 ಪೊಲೀಸ್ ಠಾಣೆ ಬಳಿ ಮ್ಯಾಟ್ರಿಕ್ಸ್ ಪ್ಯಾನ್ ಟಿಲ್ಸ್ ಎಂಬ ಹೆಸರಿನ 579 ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸುವ ಸವಾರರ ಮುಖ ಚಹರೆಗಳನ್ನು ಸೆರೆಹಿಡಿಯುತ್ತದೆ. ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಸೇಫ್ ಸಿಟಿ ಯೋಜನೆಯಡಿ ಇನ್ನೂ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.