ಬೆಂಗಳೂರು: ಸಂವಿಧಾನ ನೀಡಿರುವ ಹಕ್ಕುಗಳು ಸಾರ್ವಜನಿಕರಿಗೆ ಸಿಗಬೇಕಾದರೆ ಮತ್ತು ಸಂವಿಧಾನದ ಆಶಯಗಳು ಭದ್ರವಾಗಿ ನೆಲೆಯೂರಬೇಕಾದರೆ ನ್ಯಾಯಾಂಗ ವ್ಯವಸ್ಥೆ ಪ್ರಾಮಾಣಿಕ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ್ ಅವರು ಅಭಿಪ್ರಾಯಪಟ್ಟರು.
ಹೈಕೋರ್ಟ್ ಆವರಣದಲ್ಲಿ ಸರಳವಾಗಿ ಏರ್ಪಡಿಸಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಓಕ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಂವಿಧಾನದ ರಕ್ಷಣೆ ಮತ್ತು ಅದರ ಆಶಯಗಳನ್ನು ಜಾರಿಗೊಳಿಸಲು ನ್ಯಾಯಾಂಗದ ಮಹತ್ವ ಎಷ್ಟಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ದಶಕಗಳೇ ಕಳೆದಿದ್ದರೂ ಇನ್ನೂ ಬಹುಸಂಖ್ಯಾತ ಜನರಿಗೆ ಅವರ ಮೂಲಭೂತ ಹಕ್ಕುಗಳ ಅರಿವೇ ಇಲ್ಲ. ಇಂತಹ ಸಂದರ್ಭದಲ್ಲಿ ದೇಶದ ಜನರ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಲು ನ್ಯಾಯಾಂಗ ಕ್ಷೇತ್ರ ಪ್ರಾಮಾಣಿಕವಾಗಿ, ಸ್ವತಂತ್ರವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕಿದೆ. ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿ ದೇಶದ ಪ್ರಜೆಗಳಿಗೆ ಹಲವು ಹಕ್ಕುಗಳನ್ನು ನೀಡಿದೆ. ಸಂವಿಧಾನ ನಮ್ಮನ್ನು ರಕ್ಷಿಸುವಂತೆ, ಸಂವಿಧಾನವನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ನ್ಯಾಯಾಂಗದ ಮೇಲಿದೆ. ಅದೇ ರೀತಿ ಸಂವಿಧಾನದ ಆಶಯಗಳನ್ನು ರಕ್ಷಿಸಲು, ಜಾರಿಗೊಳಿಸಲು ನ್ಯಾಯಾಂಗ ಸ್ವತಂತ್ರ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೈಕೋರ್ಟ್ನ ಎಲ್ಲಾ ನ್ಯಾಯಮೂರ್ತಿಗಳು, ಸಿಬ್ಬಂದಿ ವರ್ಗ ಹಾಗೂ ಹಲವು ವಕೀಲರು ಭಾಗವಹಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳ ಭಾಷಣದ ಬಳಿಕ ಸಿಬ್ಬಂದಿ ದೇಶಭಕ್ತಿ ಗೀತೆ ಹಾಡಿದರು.