ಬೆಂಗಳೂರು: ಯುಪಿಎಸ್‍ಸಿ ಪರೀಕ್ಷೆಯಲ್ಲಿ 646ನೇ ಸ್ಥಾನ ಪಡೆದು ಕ್ರೈಸ್ (KREIS Bangalore) ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ರಮೇಶ್ ಗುಮಗೇರಿ ಅವರನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶ್ಲಾಘಿಸಿ, ಅಭಿನಂದಿಸಿದ್ದಾರೆ.
ರಮೇಶ್ ಜೊತೆ ವಿಡಿಯೋ ಸಂವಾದ ನಡೆಸಿದ ಉಪಮುಖ್ಯಮಂತ್ರಿ, ಅಧ್ಯಯನ, ಪೂರ್ವ ತಯಾರಿ ಕುರಿತು ಚರ್ಚಿಸಿ, ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿ, ವಿಶೇಷ ಅತಿಥಿ ಉಪನ್ಯಾಸಕರಾಗಿ ಆಗಾಗ ವಸತಿ ಶಾಲೆಗಳಿಗೆ ಭೇಟಿ ನೀಡಿ, ಎಲ್ಲಾ ವಿದ್ಯಾರ್ಥಿಗಳಲ್ಲಿ ಅಖಿಲ ಭಾರತ ಸೇವೆ ಕನಸನ್ನು ಮೂಡಿಸಿ, ಪೂರ್ವ ಸಿದ್ದತೆ ಕೈಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ರಮೇಶ್, ವಸತಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಪೂರ್ವ ತರಬೇತಿಗೆ ಪೂರಕವಾದ ವಾತವರಣ, ಉಚಿತವಾಗಿ ಊಟ, ವಸತಿ, ಬಟ್ಟೆ, ನೋಟ್ ಪುಸ್ತಕಗಳು, ಪಠ್ಯಪುಸ್ತಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕ್ರೈಸ್ ನೀಡುವುದರ ಜೊತೆಗೆ ಗುರುಕುಲ ಮಾದರಿಯ ಪೂರಕ ವಾತವರಣವನ್ನು ಕಲ್ಪಿಸಿದೆ ಎಂದರು.
ಬಡತನ, ಸಂಕಷ್ಟ, ಗ್ರಾಮೀಣ ಪ್ರದೇಶ, ಸೌಲಭ್ಯಗಳ ಕೊರತೆ ಎನ್ನುವುದನ್ನು ಮೀರಿ, ಅಖಿಲ ಭಾರತ ಸೇವೆಗೆ ಆಯ್ಕೆಯಾಗಲು ಕ್ರೈಸ್ ಕಾರಣವಾಗಿದೆ. ಈ ವಸತಿ ಶಿಕ್ಷಣ ಸಂಸ್ಥೆಗೆ ಆಭಾರಿಯಾಗಿದ್ದೇನೆ. ಕ್ರೈಸ್‍ಗೆ ಅತಿಥಿ ಉಪನ್ಯಾಸಕನಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸದಾ ಸಿದ್ದರಿರುವುದಾಗಿ ತಿಳಿಸಿದ ಅವರು, ತಾವು ಪಡೆದ ಸ್ಥಾನಕ್ಕೆ ಐಎಎಸ್ ದೊರಕುವ ಸಂಭವವಿದೆ ಎಂದು ಹರ್ಷ ವ್ಯಕ್ತಪಡಿಸಿದರು.