ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು:
ಹೆಚ್.ವಿ ವಿಜಯ್ ಕುಮಾರ್(41), ಜ್ಞಾನಮೂರ್ತಿ(42), ಜಿ.ಕೆ ರವಿಚಂದ್ರ(36), ಮುರುಗೇಶ್(27), ಮುನಿರಾಜು.ಜಿ (33) ಮತ್ತು ಕುಮಾರಸ್ವಾಮಿ (38) ಬಂಧಿತ ಆರೋಪಿಗಳು.
ಪ್ರಕರಣ:
ಕಳೆದ ತಿಂಗಳು ವಿಜಯಪುರ ಜಿಲ್ಲೆಯ ನೀವರಗಿ ಗ್ರಾಮದ ಗೋಪಾಲ್ ಮಲ್ಲಪ್ಪ ಕಾಂಬಳೆ ಎಂಬ ಯುವಕನಿಗೆ ಕೆಲಸ ಕೊಡಿಸುತ್ತೇನೆ ಎಂದು ಆರೋಪಿಗಳು 10 ಲಕ್ಷ ರೂಪಾಯಿ ತರುವಂತೆ ಹೇಳಿದ್ದರು. ಮಾಲೂರು ಕಡೆ ಹೋಗುತ್ತಿದ್ದಂತೆ ಶಿವಕುಮಾರ್ ಆಲಿಯಾಸ್ ದಾದಾಫೀರ್ ತನ್ನ ಸಹಚರರಿಂದ ಪೊಲೀಸರಂತೆ ಡ್ರಾಮಾ ಮಾಡಿಸಿ ಕಾರು ಅಡ್ಡಗಟ್ಟಿ ಗೋಪಾಲ್ ಮಲ್ಲಪ್ಪ ಕಾಂಬಳೆ ಅವರನ್ನು ಹೆದರಿಸಿ 10 ಲಕ್ಷ ರೂ. ಹಣ ಕಿತ್ತುಕೊಂಡು, ದೇವನಗುಂದಿ ಕ್ರಾಸ್ ಬಳಿ ಗೋಪಾಲ್ ಮಲ್ಲಪ್ಪ ಕಾಂಬಳೆ ಅವರನ್ನು ಕಾರಿನಿಂದ ತಳ್ಳಿ ಪರಾರಿಯಾಗಿದ್ದರು.
ನಂತರ ಗೋಪಾಲ್ ಮಲ್ಲಪ್ಪ ಕಾಂಬಳೆ ಹೊಸಕೋಟೆ ಠಾಣೆಗೆ ಬಂದು ದೂರು ನೀಡಿದರು. ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 7.14 ಲಕ್ಷ ರೂ. ನಗದು, 2 ಕಾರು, 6 ಮೊಬೈಲ್, 2 ವಾಕಿ ಟಾಕಿ, ಒಂದು ಲಾಟಿ ಹಾಗೂ ಮಿಲಿಟರಿ ಟೋಪಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ದಾದಾಫೀರ್ ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ; ಸಿಎಂ ಆಗಲಿ, ಬೇರೆ ಯಾರೇ ಆಗಲಿ ಕಾನೂನಿನ ಪ್ರಕಾರ ಶಿಕ್ಷೆಯಾಗ್ಬೇಕು: ಮಾಜಿ ಡಿಸಿಎಂ ಜಿ.ಪರಮೇಶ್ವರ್
ನಂತರ ಈ ಆರೋಪಿಗಳ ದಸ್ತಗಿರಿಯಿಂದ, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊ.ನಂ.189/2021 ಕಲಂ .420 ಜೊತೆಗೆ 34 ಐಪಿಸಿ ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ದಸ್ತಗಿರಿ ಮಾಡಿರುವ ಆರೋಪಿಗಳಾದ ರವಿಚಂದ್ರ ಮತ್ತು ಮುರುಗೇಶ್ ಅವರು ನಾಗರಾಜ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು, ಮೈಸೂರು ಮೂಲದ ನವೀನ್ ಎಂಬ ವ್ಯಕ್ತಿಗೆ ಕಡಿಮೆ ಬೆಲೆಗೆ ಜಮೀನು ಕೊಡಿಸುವುದಾಗಿ ಆಸೆ ತೋರಿಸಿ ವಂಚಿಸಿದ್ದಾರೆ. ನವೀನ್ನನ್ನು 4 ಲಕ್ಷ ರೂ. ಹಣದೊಂದಿಗೆ ಸರ್ಜಾಪುರಕ್ಕೆ ಕರೆಯಿಸಿಕೊಂಡು, ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಪೊಲೀಸರಂತೆ ಹೋಗಿ ನವೀನ್ ಬಳಿ ಇದ್ದ 4 ಲಕ್ಷ ಹಣವನ್ನು ತೆಗೆದುಕೊಂಡು ಮೋಸ ಮಾಡಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.