ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 1ಎಕರೆ 34 ಗುಂಟೆ ಜಮೀನು ಹಾಗೂ 5 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೆ ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯದ ಗಂಡು ಅಂಬರೀಶ್ ಸ್ಮಾರಕ ನಿರ್ಮಾಣದ ಉನ್ನತ ಮಟ್ಟದ ಸಮಿತಿಯ ಜೊತೆ ಸಭೆ ನಡೆಸಿದ ಸಿಎಂ, ಅಂಬರೀಶ್ ಅಂತ್ಯ ಸಂಸ್ಕಾರ ಮಾಡಿರುವ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ 1 ಎಕರೆ 34 ಗುಂಟೆ ಜಮೀನು ಮಂಜೂರು ಮಾಡುವುದರ ಜೊತೆಗೆ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರೊಂದಿಗೆ ಸ್ಮಾರಕ ನಿರ್ಮಾಣ ತ್ವರಿತವಾಗಿ ನಡೆಸುವ ಸಲುವಾಗಿ, ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸುವಂತೆ ಸೂಚಿಸಿದ್ದಾರೆ.
ಈ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿನ ನಟ ದೊಡ್ಡಣ್ಣ ಹಾಗೂ ಸ್ಮಾರಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.