ಬಾಗಲಕೋಟೆ : ತೋಟಗಾರಿಕೆ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಹಾಗೂ ಸಂಶೋಧನೆಗೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಬಿ ಎಸ್ ಡಿಯೂರಪ್ಪನವರು ಭರವಸೆ ನೀಡಿದರು.
ನಗದಲ್ಲಿ ನಡೆಯುತ್ತಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೂರು ದಿನಗಳ ತೋಟಗಾರಿಕೆ ಮೇಳಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತೋಟಗಾರಿಕೆ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ. ರಾಜ್ಯಕ್ಕೆ ₹44878 ಕೋಟಿ ಆದಾಯವನ್ನು ತೋಟಗಾರಿಕೆ ಕೃಷಿ ನೀಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಹಾಗೂ ಸಂಶೋಧನೆಗೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ತೋಟಗಾರಿಕೆಯನ್ನು ಉದ್ದಿಮೆಯಾಗಿಸಲು ಕ್ರಮ
ಸಿಎಫ್ಟಿಆರ್ಐ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಓದಿ-ನೋಟ್ಗಳ ಮೇಲೆ ಪ್ರಚೋದನಾತ್ಮಕ ಬರಹ.. ದೇವಾಲಯದ ಹುಂಡಿಯಲ್ಲಿ ಕಾಂಡೋಮ್
ಕೃಷಿ ರೈಲ್ ಯೋಜನೆ ಬಳಕೆ : ಪ್ರಧಾನಮಂತ್ರಿಯವರು 100ನೇ ಕಿಸಾನ್ ರೈಲಿಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗಿದೆ. ಶೀಘ್ರ ಕೊಳೆತು ಹೋಗಬಹುದಾದ ದಾಳಿಂಬೆ, ಕಿತ್ತಳೆ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ಕೃಷಿ ರೈಲ್ ಯೋಜನೆಯ ಸೌಲಭ್ಯ ಬಳಸಿಕೊಳ್ಳಲಾಗುವುದು.
ತೋಟಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ತನ್ನ ಸ್ಥಾನವನ್ನು ಕಾಯ್ದುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪೂರಕ ಸಂಶೋಧನೆ, ವಿಸ್ತರಣೆ ಹಾಗೂ ಇತರ ಮೂಲಕಸೌಕರ್ಯ ಒದಗಿಸಲು ಸರ್ಕಾರ ಬದ್ಧ ಎಂದು ತಿಳಿಸಿದರು.
ಸಂಶೋಧನೆಗೆ ಹಾಗೂ ಇತರ ಉಪಯೋಗಕ್ಕೆ ಜಮೀನು ನೀಡಲು ಮನವಿ
ಇದೇ ಸಮಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ವಿಶ್ವವಿದ್ಯಾಲಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಜಮೀನು ಬೇಕಾಗಿದೆ. ಕೂಡಲಸಂಗಮ, ತುಳಸಿಗೇರ ಬಳಿ ನೂರಾರು ಏಕರೆ ಜಮೀನು ಇದ್ದು ಸಂಶೋಧನೆಗೆ ಹಾಗೂ ಇತರ ಉಪಯೋಗಕ್ಕಾಗಿ ಜಮೀನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ತೋಟಗಾರಿಕೆ ಸಚಿವರು ಸಹ ಆನ್‌ಲೈನ್ ಮೂಲಕ ಭಾಷಣ ಮಾಡಿ ತೋಟಗಾರಿಕೆ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ ತಿಳಿಸಿದರು.
ಬೀಜೋತ್ಪದನೆ ಕೇಂದ್ರ ಮಾಡಿ
ನಂತರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿಶ್ವವಿದ್ಯಾಲಯದಲ್ಲಿ ಕುಡಿಯುವ ನೀರಿನ ತೊಂದರೆ ಹೋಗಲಾಡಿಸಲು ಇಂದಿನ ಶಾಸಕರು ಹತ್ತು ಕೋಟಿ ರೂ. ಅನುದಾನ ಕೂಡಿಸುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ. ಈಗ ಸಂಶೋಧನೆ ಆಗಬೇಕಿದ್ದು, ಬೀಜೋತ್ಪಾದನೆ ಕೇಂದ್ರ ಮಾಡಿ, ಖಾಸಗಿ ಅವರು ಮಾರಾಟ ಮಾಡುವುದಕ್ಕಿಂತ ರೈತರಿಗೆ ಕಡಿಮೆ ದರದಲ್ಲಿ ಬೀಜಗಳು ಸಿಗುವಂತಾಗಬೇಕಾಗಿದೆ. ಸಂಸ್ಕರಣಾ ಘಟಕ ಸೇರಿದಂತೆ ರೈತರಿಗೆ ಈ ವಿಶ್ವವಿದ್ಯಾಲಯ ದೇವಾಲಯ ಆಗಬೇಕಾಗಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಈ ಭಾರಿ ಕೊರೊನಾ ಹಿನ್ನೆಲೆ ಸಂಕ್ಷಿಪ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫಲ ಪುಷ್ಪ ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿತೆ,ಮುಧೋಳ ಶ್ವಾನ ಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.