ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುತ್ತಿದ್ದ ಲೈಪೊಸೋಮಲ್ ಆ್ಯಂಪೊಟೆರಿಸಿನ್ ಬಿ ಚುಚ್ಚುಮದ್ದಿನ ಕೊರತೆ ಉಂಟಾಗಿದೆ. ಅದರ ಬದಲಿಗೆ 40 ಕೋಟಿ ರೂ. ವೆಚ್ಚದಲ್ಲಿ ಪರ್ಯಾಯ ಔಷಧಿಯನ್ನ ರಾಜ್ಯ ಸರ್ಕಾರ ಖರೀದಿ ಮಾಡಲಿದೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರ ಹಾಗೂ ಔಷಧಿಗಳ ಕಿಟ್ ವಿತರಣೆ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಸಹ ಭಾಗಿಯಾಗಿದ್ದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೈಪೊಸೋಮಲ್ ಆ್ಯಂಪೊಟೆರಿಸಿನ್ ಬಿ ಚುಚ್ಚುಮದ್ದು ಕೊರತೆ ಇದೆ. ಅದಕ್ಕಾಗಿ ರಾಜ್ಯ ಸರ್ಕಾರ 40 ಕೋಟಿ ರೂ. ವೆಚ್ಚದಲ್ಲಿ ಪರ್ಯಾಯ ಎಮಲ್ಷನ್ ಆಂಪೋಟೆರಿಸನ್-ಬಿ ಔಷಧಿಯನ್ನು ಖರೀದಿ ಮಾಡಲು ಮುಂದಾಗಿದೆ.
ಅಲ್ಲದೆ, 30 ಕೋಟಿ ರೂ. ವೆಚ್ಚದ ಒಂದು ಕೋಟಿ ವಯಲ್ಸ್ ಖರೀದಿಗೆ 5 ದಿನಗಳ ಹಿಂದೆಯೇ ಆದೇಶ ನೀಡಲಾಗಿತ್ತು. ಅದರ ಜೊತೆಯಲ್ಲೇ ಅಂಪೋಟೆರಿಸಿನ್ ಪ್ಲೇನ್ ಔಷಧಿಯ ಖರೀದಿಗೂ ಆದೇಶ ನೀಡಲಾಗಿದೆ. ನಿನ್ನೆಯಿಂದ ರಾಜ್ಯಕ್ಕೆ ಸರಬರಾಜು ಪ್ರಾರಂಭವಾಗಿದೆ ಎಂದು ತಿಳಿಸಿದರು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಪರ್ಯಾಯ ಔಷಧಿಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ಸಲ್ಪ ಪ್ರಮಾಣದಲ್ಲಿ ಸೈಡ್ ಎಫೆಕ್ಟ್ ಸಹ ಇದ್ದು, ಯೋಚಿಸಿ ಕೊಡಬೇಕಾಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. 30 ಲಕ್ಷ ಕಪ್ಪು ಶಿಲೀಂಧ್ರ ರೋಗಿಗಳಿಗೆ ಆಗುವಷ್ಟು ಔಷಧಿಯನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಬ್ರಾಹ್ಮಣರಿಗೆ ಪ್ರತ್ಯೇಕ ಕೋವಿಡ್ ಲಸಿಕೆ : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಕೋವಿಡ್ ಲಸಿಕೆ ನೀಡಿದ ಕುರಿತು ಮಾತನಾಡಿದ ಡಿಸಿಎಂ, ಇದೆಲ್ಲ ರಾಜಕೀಯ ಪ್ರೇರಿತವಾದ ಟೀಕೆಗಳು ಅಷ್ಟೇ.. ಈ ಕುರಿತು ದೂರು ನೀಡಲಾಗಿದ್ದು, ವರದಿಯಲ್ಲಿ ಸತ್ಯಾಂಶ ಗೊತ್ತಾಗಲಿದೆ.
ಒಳ್ಳೆಯ ಉದ್ದೇಶದಿಂದ ಮಾಡಿದ ಕಾರ್ಯಕ್ರಮ ಅದು. ಕೆಲವರು ಗೊಂದಲದ ವಾತಾವರಣ ಉಂಟು ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.