ಆನೇಕಲ್: ಧಾರವಾಡ ಎಸ್ಡಿಎಂ ವಿದ್ಯಾರ್ಥಿಗಳಿಗೆ ಕೊರೊನಾ ಅಂಟಿದ ಸುದ್ದಿ ಬೆನ್ನಲ್ಲೇ ಬೆಂಗಳೂರಿನ ವಸತಿ ಶಾಲೆಯೊಂದರಲ್ಲಿ ಕೋವಿಡ್ ಸ್ಫೋಟಿಸಿದ್ದು, 33 ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆನೇಕಲ್ ತಾಲೂಕಿನ ದೊಮ್ಮಸಂದ್ರ ಸಮೀಪವಿರುವ ದಿ ಇಂಟರ್ ನ್ಯಾಷನಲ್ ಬೆಂಗಳೂರು ಬೋರ್ಡಿಂಗ್ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ 282 ಮಕ್ಕಳು ಇದ್ದರು. ಒಂದಿಬ್ಬರು ವಿದ್ಯಾರ್ಥಿಗಳು ಮಹದೇವಪುರದಿಂದ ಶಾಲೆಗೆ ಬಂದು ಹೋಗುತ್ತಿದ್ದರು. ಅವರಿಂದ ಹರಡಿರುವ ಸಾಧ್ಯತೆಯಿದೆ ಎಂದು ವೈದ್ಯರು ಮೇಲ್ನೋಟದ ಪರಿಶೀಲನೆಯಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಧಾರವಾಡದ SDM ಮೆಡಿಕಲ್ ಕಾಲೇಜಿನ 116 ವಿದ್ಯಾರ್ಥಿಗಳಿಗೆ ಕೊರೊನಾ: ಒಟ್ಟು ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ
ಶಾಲೆಯಲ್ಲೇ ಎಲ್ಲ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಮತ್ತು ತಾಲೂಕು ಆರೋಗ್ಯಾಧಿಕಾರಿ ವಿನಯ್ ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ನಿಯಮಾವಳಿಗಳಂತೆ ಮಾರ್ಗಸೂಚಿ ಜಾರಿ ಮಾಡಿರುವ ಆಡಳಿತ ಮಂಡಳಿ ವೈದ್ಯಕೀಯ ಅಧಿಕಾರಿಗಳಿಗೆ ಸ್ಪಂದಿಸುತ್ತಿದ್ದಾರೆ.