ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಮಳೆಹಾನಿ ಪರಿಹಾರ ಕಾರ್ಯಾಚರಣೆಗೆ ತುರ್ತಾಗಿ 27 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಆರ್.ಟಿ.ನಗರದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿ ಬೊಮ್ಮಾಯಿ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021ರಲ್ಲಿ ಮೈಸೂರಿನಲ್ಲಿ ಮಳೆಹಾನಿಯಿಂದ ಕೆರೆಕಟ್ಟೆಗಳು ಒಡೆದು ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಹೀಗಾಗಿ, 138 ಕೋಟಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಇದುವರೆಗೂ ಹಣ ಬಿಡುಗಡೆಯಾಗಿರಲಿಲ್ಲ ಎಂದರು.
ಬಿಜೆಪಿ ಶಾಸಕ ರಾಮದಾಸ್ ಕ್ಷೇತ್ರಕ್ಕೆ ಮಾತ್ರ 40 ಕೋಟಿ ಬಿಡುಗಡೆ ಮಾಡಿದ್ದಾರೆ. ನಾನು 2 ಸಲ ಪರಿಹಾರಕ್ಕಾಗಿ ಪ್ರಸ್ತಾವನೆ ಕೊಟ್ಟಿದ್ದರೂ ಹಣ ಬಿಡುಗಡೆ ಆಗಿರಲಿಲ್ಲ. ಹಾಗಾಗಿ, ದಯವಿಟ್ಟು ಹಣ ಬಿಡುಗಡೆ ಮಾಡಿ ಎಂದು ಹೇಳಿದ್ದೆ, ದಾವೋಸ್ಗೆ ಹೋಗಿ ಬಂದಮೇಲೆ ಮಾಡುತ್ತೇನೆ ಅಂದಿದ್ದರು. ಅದರಂತೆ ಇಂದು ನಾನೇ ಖುದ್ದಾಗಿ ಬಂದು ಭೇಟಿ ಮಾಡಿದ್ದೇನೆ. ತುರ್ತಾಗಿ 27 ಕೋಟಿ ಬಿಡುಗಡೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ