ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಾರ್ವತಿಪುರಂನಲ್ಲಿರುವ ವಾಸವಿ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಮತ್ತು ಪಾರ್ವತಿಪುರಂನಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಬಳಿಕ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಸಂದ ಸವಿ ನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಡವರಿಗೆ ಸೂರು ನೀಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ರಾಗಿಗುಡ್ಡದಲ್ಲಿ 3300 ಮನೆ ಕೆಡವಿ 10 ವರ್ಷವಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಸಹಕಾರದಿಂದ ಎರಡು ವರ್ಷದಲ್ಲಿ 3300 ಮನೆಗಳನ್ನು ಕಟ್ಟಿಕೊಡಲಾಗಿದೆ ಎಂದು ಹೇಳಿದ್ದಾರೆ.
ಜಾತಿ,ಮತ, ಧರ್ಮ ಭೇದ ಮರೆತು ಬಡವರಿಗೆ ದೇಶಾದ್ಯಂತ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವವರಿಗೆ ಮತ್ತು ಬಿ.ಜೆ.ಪಿ.ಸರ್ಕಾರಕ್ಕೆ ಸಲ್ಲುತ್ತದೆ. ಸರ್ಕಾರದ ಇಚ್ಛಾಶಕ್ತಿಯಿಂದ ವಸತಿ ಯೋಜನೆಯಲ್ಲಿ ಮಹಾಕ್ರಾಂತಿ ತರಲಾಗಿದೆ. 3 ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 2800 ಕೊಳಚೆ ಪ್ರದೇಶಗಳಿದ್ದು, ಅವುಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸುಮಾರು 6300 ಎಕರೆ ಪ್ರದೇಶವನ್ನು ಹಕ್ಕುಪತ್ರದ ಮೂಲಕ ಬಡವರಿಗೆ ನೀಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಪರಿಚಯ ಪತ್ರ ನೀಡಲಾಗುತ್ತಿತ್ತು, ಇದೀಗ ಹಕ್ಕುಪತ್ರ ನೀಡಲಾಗುತ್ತಿದೆ. ಹಕ್ಕುಪತ್ರವನ್ನು ಮಹಿಳೆಯರಿಗೆ ನೋಂದಣಿ ಮಾಡಿಕೊಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಡವರ ವಸತಿ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1000 ಸಾವಿರ ಮನೆ ನಿರ್ಮಾಣಕ್ಕೆ ಸರ್ಕಾರ ಆದೇಶ ನೀಡಿದೆ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ತೊರೆದು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
80 ಲಕ್ಷ ಕುಟುಂಬದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಾಣ : ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸೂರು ಇಲ್ಲದ ದೇಶದ 80 ಲಕ್ಷ ಕುಟುಂಬದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುದಾನ ಅಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ವಸತಿ ಯೋಜನೆಯಲ್ಲಿ ಫಲಾನುಭವಿ ಮಹಿಳೆಯರನ್ನು ಗುರುತಿಸಿ, ವಸತಿಗಳನ್ನು ನೋಂದಣಿ ಮಾಡಿಕೊಡಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಮತ್ತು ಬಡವರನ್ನು ಕಾಂಗ್ರೆಸ್ ಪಕ್ಷ ಈ ಹಿಂದೆ ಕಡಗಣನೆ ಮಾಡಿತ್ತು. ಅದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಆವಾಸ್ ಯೋಜನೆ, ಮುದ್ರ ಯೋಜನೆಯಂತಹ ಬಡವರ ಪರವಾದ ಯೋಜನೆಗಳನ್ನು ಕೊಟ್ಟು ಜನರನ್ನು ಬಡತನದಿಂದ ಮುಕ್ತ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಪೇಟೆ ಶಾಸಕ ಉದಯ ಬಿ.ಗರುಡಾಚಾರ್, ವಿಧಾನಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಮಾಜಿ ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ ಮೊದಲಾದವರು ಪಾಲ್ಗೊಂಡಿದ್ದರು.