ಬೆಂಗಳೂರು : ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಅವಧಿ ಎರಡೂವರೆ ವರ್ಷಕ್ಕೆ ಕಡಿತಗೊಳಿಸುವುದು ಹಾಗೂ ಮೀಸಲಾತಿ ಸರದಿ 10 ವರ್ಷಗಳಿಂದ ಐದು ವರ್ಷ ಅವಧಿಗೆ ಕಡಿತಗೊಳಿಸುವ 2020ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.
ಈ ತಿದ್ದುಪಡಿ ವಿಧೇಯಕಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 10 ವರ್ಷ ಇರುವ ಮೀಸಲಾತಿ ಅವಧಿಯನ್ನು ಐದು ವರ್ಷ ಮಾಡಿದರೆ ಹೇಗೆ? ಇದರಿಂದ ನಾಯಕತ್ವ ಹೇಗೆ ಬೆಳೆಯುತ್ತದೆ?. ಐದು ವರ್ಷಕ್ಕೆ ಇಳಿಸುವುದು ಸಾಧುವಲ್ಲ. ಇದರಿಂದ ನಾಯಕತ್ವ ಬೆಳೆಯಲ್ಲ. ನಾಯಕತ್ವ ಬೆಳೆಯುವ ಉದ್ದೇಶದಿಂದ ನೀಡುವ ಮೀಸಲಾತಿಯ ಉದ್ದೇಶ ಉಳಿಯಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಐದು ವರ್ಷ ಇರಲಿ. ಅದನ್ನು ಎರಡೂವರೆ ವರ್ಷಕ್ಕೆ ಏಕೆ ಕಡಿತ ಮಾಡ್ತೀರಾ?. ಇದರಿಂದ ನಾಯಕತ್ವ ಬೆಳೆಯಲ್ಲ. ಇದು ವಿಕೇಂದ್ರೀಕರಣ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಈ ತಿದ್ದುಪಡಿ ವಾಪಸು ತಗೊಳ್ಳಿ, ಇದರ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಆದರೆ, ಹೆಚ್ ಡಿ ರೇವಣ್ಣ ಈ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಮೀಸಲಾತಿ ಬಗ್ಗೆ ನಿಮಗೆ ಪಾಠ ಹೇಳುವಷ್ಟು ನಾನು ದೊಡ್ಡವನಲ್ಲ. ಸದ್ಯ ಇರುವ ಮೀಸಲಾತಿಯಿಂದ ಹಿಂದುಳಿದ ವರ್ಗದವರು, ದಲಿತರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿದೆಯಾ?. ನಾನು ಯಾವುದೇ ಪ್ರಭಾವಕ್ಕೊಳಗಾಗಿ ಈ ವಿಧೇಯಕ ತಂದಿಲ್ಲ. ಹಿಂದುಳಿದ ವರ್ಗಕ್ಕೆ, ದಲಿತ ವರ್ಗಕ್ಕೆ ಅನ್ಯಾಯ ಆಗದಿರಲಿ ಎಂಬ ಉದ್ದೇಶಕ್ಕಾಗಿನೇ ಈ ವಿಧೇಯಕ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಅಸ್ತು : ಬೆಂಗಳೂರು ಸೇರಿ ರಾಜ್ಯದ ನಗರ ಪ್ರದೇಶದಲ್ಲಿನ ಬಿ-ಖರಾಬು ಭೂಮಿ ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆಯಿತು. ಖಾಸಗಿ ನಿವೇಶನ ನಡುವೆ ಸಿಲುಕಿರುವ ಬಿ ಖರಾಬು ಸರ್ಕಾರಿ ಜಮೀನನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವ ಹಿನ್ನೆಲೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಮಾರ್ಗಸೂಚಿಯ ದರಕ್ಕೆ ಎರಡು ಪಟ್ಟು ದರ ನಿಗದಿ ಮಾಡಿ ಮಾರಾಟ ಮಾಡಬಹುದಾಗಿದೆ.
ಇದೇ ವೇಳೆ ನಗರ ಪ್ರದೇಶ ವ್ಯಾಪ್ತಿಗೆ ಸಿಮೀತವಾಗಿರುವ ವಿಧೇಯಕವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಸೇರಿ ಪ್ರತಿಪಕ್ಷದ ಹಲವು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಕಂದಾಯ ಸಚಿವ ಆರ್ ಅಶೋಕ್ ಮುಂದಿನ ದಿನದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಕರ್ನಾಟಕ ನಗರ ಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಅಸ್ತು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ರಾಜ್ಯದ ಎಲ್ಲಾ ನಗರ ಪಾಲಿಕೆಗಳಲ್ಲಿ ಘನತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವೈಜ್ಞಾನಿಕ ವಿಧಾನದಲ್ಲಿ ಮತ್ತು ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಸಾರ ವಿಲೇವಾರಿ ಮಾಡಬೇಕು. ಆದರೆ, ಘನತ್ಯಾಜ್ಯ ನಿರ್ವಹಣೆಯ ಹೊಣೆಗಾರಿಕೆ ಪಡೆದುಕೊಂಡ ಸಂಸ್ಥೆಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಬಂದಿವೆ. ನಿಯಮ ಉಲ್ಲಂಘನೆಗೆ ಈವರೆಗೆ ಕೇವಲ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಇದನ್ನು 2 ಲಕ್ಷ ರೂ.ವರೆಗೆ ವಿಧಿಸುವ ಸಂಬಂಧ ಕರ್ನಾಟಕ ನಗರ ಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು.
16 ವಿಧೇಯಕಗಳಿಗೆ ಸದನ ಅಸ್ತು
ಇಂದು ಒಟ್ಟು 16 ವಿಧೇಯಕಗಳಿಗೆ ಸದನ ಅಂಗೀಕಾರ ನೀಡಿತು.
- ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ
- ಕರ್ನಾಟಕ ನಗರ ಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕ
- ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ತಿದ್ದುಪಡಿ) ವಿಧೇಯಕ
- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಮೂರನೇ ತಿದ್ದುಪಡಿ) ವಿಧೇಯಕ
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ವಿಧೇಯಕ
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ವಿಧೇಯಕ
- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ)ವಿಧೇಯಕ
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ
- ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ
- ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ
- ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ವಿಧೇಯಕ
- ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ
- ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ
- ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ