ಬೆಂಗಳೂರು: ಕಂಟೈನ್ಮೆಂಟ್ ವಲಯ ಪಾದರಾಯನಪುರದಲ್ಲಿ ಇಂದು 14 ವರ್ಷದ ಪುಟ್ಟ ಬಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಪ್ಪ-ಅಮ್ಮನ ಜೊತೆ ವಾಸಿಸುತ್ತಿದ್ದ ಈ ಹುಡುಗ ಹಾಲಿಗಾಗಿ ಓಡಾಡುತ್ತಿದ್ದ. ಬೇರೆಲ್ಲಿಗೂ ಪ್ರಯಾಣಿಸಿಲ್ಲ ಎಂದು ಬಾಲಕ ಆರೋಗ್ಯಧಿಕಾರಿಗಳಲ್ಲಿ ಹೇಳಿದ್ದಾನೆ. ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಅಪ್ಪ ಅಮ್ಮನ ಜೊತೆ ಫಿವರ್ ಕ್ಲಿನಿಕ್ನಲ್ಲಿ ತಪಾಸಣೆ ಮಾಡಿಸಿಕೊಂಡಿದ್ದ. ಈ ವೇಳೆ ಮೂಗಿಗೆ ವಾಸನೆ ಬರುತ್ತಿಲ್ಲ. ಜೊತೆಗೆ ನಾಲಗೆಯಲ್ಲಿ ಯಾವುದೇ ರುಚಿ ಗೊತ್ತಾಗುತ್ತಿಲ್ಲ ಎಂದೂ ಹೇಳಿದ್ದ.
ಹೆಚ್ಚಿನ ಪರೀಕ್ಷೆಗಾಗಿ ವಿಕ್ಟೋರಿಯಾಗೆ ಸೂಚಿಸಲಾಗಿತ್ತು. ಇಲ್ಲಿ ಪರೀಕ್ಷೆ ನಡೆಸಿದ ಬಳಿಕ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಬಾಲಕ ಅಪ್ಪ-ಅಮ್ಮನಿಗೂ ಪರೀಕ್ಷೆ ನಡೆಸಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಸದ್ಯ ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ ತಿಳಿಸಿದ್ದಾರೆ.
ಪಾದರಾಯನಪುರ ವಾರ್ಡ್ನಲ್ಲಿ ಒಟ್ಟು 22 ಮಂದಿಗೆ ಕೊರೊನಾ ವರದಿ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಡ್ 136ರಲ್ಲಿ ಮೂರು ಪ್ರಕರಣಗಳಿವೆ. ಈಗಾಗಲೇ 29 ಪ್ರಥಮ ಸಂಪರ್ಕಿತರನ್ನು ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಂದೂ ಸಹ 86 ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.