ಬೆಂಗಳೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ ಆಗಿದ್ದ 67 ವರ್ಷದ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರ ಜೊತೆ ಸಂಪರ್ಕದಲ್ಲಿದ್ದ 14 ಜನರಿಗೆ ಕೊರೊನಾ ತಗುಲಿದೆ. ನಂದಿನಿ ಲೇಔಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಾರ್ಚ್ ತಿಂಗಳಲ್ಲೇ ನಗರಕ್ಕೆ ವಾಪಸ್ ಆಗಿದ್ದ ಈ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಅವರ ಸಂಪರ್ಕದಲ್ಲಿದ್ದ ಸೊಸೆ ಕೂಡಾ ಪರೀಕ್ಷಿಸಿಕೊಂಡಾಗ ಅವರಿಗೂ ಪಾಸಿಟಿವ್ ಬಂದಿದೆ. ಆದರೆ ಎಸಿಮ್ಟಮ್ಯಾಟಿಕ್ ಆಗಿದ್ದರು. ಕೊರೊನಾ ಪರೀಕ್ಷೆ ನಡೆಸುವ ಮೊದಲು ನಾಗರಬಾವಿಯ ಸ್ಪಂದನಾ ಆಸ್ಪತ್ರೆಯಲ್ಲಿ ಸೊಸೆ ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಚಿಕಿತ್ಸೆ ಪಡೆದ 14 ಜನಕ್ಕೂ ಪಾಸಿಟಿವ್ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಮಹಾಲಕ್ಷ್ಮಿಲೇಔಟ್ ಹಿರಿಯ ಆರೋಗ್ಯ ಅಧಿಕಾರಿ, ಮಾರ್ಚ್ ತಿಂಗಳಲ್ಲಿ ಈ ಘಟನೆ ನಡೆದಿದೆ. ವೈದ್ಯರು ಚಿಕಿತ್ಸೆ ನೀಡಿದ ಹಾಗೂ ಅವರ ಸಂಪರ್ಕಿತರ 250 ಮಂದಿಯನ್ನೂ ಪರೀಕ್ಷಿಸಲಾಗಿದೆ. ಇದರಲ್ಲಿ 14 ಜನರಿಗೆ ಪಾಸಿಟಿವ್ ದೃಢಪಟ್ಟಿದೆ ಎಂದರು.