ಯಲಹಂಕ : ನಕಲಿ ಅಕೌಂಟ್ ಸೃಷ್ಟಿಸಿ ತೆರಿಗೆ ರೂಪದಲ್ಲಿ ಬಂದಿದ್ದ 12.60 ಲಕ್ಷ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿದ ಆರೋಪದ ಮೇಲೆ ಪಂಚಾಯತ್ ಅಧ್ಯಕ್ಷನ್ನು ಬಂಧಿಸಲಾಗಿದೆ.
ಬೆಂಗಳೂರು ಉತ್ತರ ತಾಲೂಕು ಬಾಗಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮುನೇಗೌಡರನ್ನು, ಪಿಡಿಓ ಅರ್ಥಪೂರ್ಣೇಶ್ವರಿ ದೂರಿನ ಹಿನ್ನೆಲೆ ಬಂಧಿಸಲಾಗಿದೆ. ಆರೋಪಿತ ಮುನೇಗೌಡ ಮಾಜಿ ಸಚಿವ ಕೃಷ್ಣಬೈರೇಗೌಡರ ಆಪ್ತರಾಗಿದ್ದಾರೆ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಜಿಯೋ ಡಿಜಿಟಲ್ ಫೈಬರ್ ಪ್ರೈ.ಲಿ ಕಂಪನಿ ಬಾಗಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಕಾಮಾಗಾರಿಗಾಗಿ ಲೈಸೆನ್ಸ್ ಪಡೆಯಬೇಕಿತ್ತು. ಲೈಸೆನ್ಸ್ಗಾಗಿ ಪಂಚಾಯತ್ ಪಿಡಿಓ ಕೇಳಿದ್ದಾಗ 12 ಲಕ್ಷದ 60 ಸಾವಿರ ತೆರಿಗೆ ಕಟ್ಟುವಂತೆ ತಿಳಿಸಿದ್ದರು. ಆದರೆ ಪಂಚಾಯತ್ ಲೈಸೆನ್ಸ್ ಇಲ್ಲದೆ ಕೇಬಲ್ ಕಾಮಾಗಾರಿ ನಡೆಯುತ್ತಿದ್ದಾಗ ಪಿಡಿಓ ಪ್ರಶ್ನೆ ಮಾಡಿದ್ದಾರೆ. ಕಂಪನಿಯವರು ತೆರಿಗೆಯನ್ನ ಡಿಡಿ ಮೂಲಕ ಅಧ್ಯಕ್ಷ ಮುನೇಗೌಡರಿಗೆ ಕೊಟ್ಟಿರುವುದ್ದಾಗಿ ಹೇಳಿದ್ದರು.
ಆದರೆ ಮುನೇಗೌಡ ತೆರಿಗೆ ಹಣವನ್ನ ಸಂಜಯ್ ನಗರದ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಗಲೂರು ಹೆಸರಿನ ನಕಲಿ ಅಕೌಂಟ್ ಸೃಷ್ಟಿಸಿ ಹಣವನ್ನ ಜಮೆ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷನ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.