ನೆಲಮಂಗಲ: ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಿಂದ ನಡೆಯಿತು. ಈ ವೇಳೆ ಸ್ಥಳೀಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದ್ರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ 'ದಕ್ಷಿಣಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೊನ್ನಶಾಮಯ್ಯ ನೇತೃತ್ವದಲ್ಲಿ ತ್ಯಾಮಗೊಂಡ್ಲು ಗ್ರಾಮದ ಚಿಂತಕ, ಕವಿ, ವಾಗ್ಮಿ, ಸಂಘಟಕ ಎಸ್. ಪಿನಾಕಪಾಣಿಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶಿವಗಂಗೆಯ ಶಾರದಾ ಕ್ರಾಸ್‍ನಿಂದ ವೇದಿಕೆಯವರೆಗೂ ಎಸ್. ಪಿನಾಕಪಾಣಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಶ್ರದ್ಧಾ ಕೇಂದ್ರವಾಗಿರುವ ಶಿವಗಂಗೆ ಮತ್ತೊಮ್ಮೆ ಕನ್ನಡದ ಸಾಂಸ್ಕೃತಿಕ ಕೇಂದ್ರವಾಗಿ ಎದ್ದು ನಿಲ್ಲಬೇಕಿದೆ. ತಿಂಗಳಿಗೊಂದರಂತೆ ಪ್ರತಿಯೊಂದು ಮನೆಯಲ್ಲಿಯೂ ವರ್ಷಕ್ಕೆ ಕನಿಷ್ಟ 12 ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ಕನ್ನಡದ ವಾತಾವರಣವನ್ನು ಸೃಷ್ಠಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.
ವೇದಿಕೆ ಮೇಲೆ ಕಪ್ಪುಪಟ್ಟಿ ಪ್ರದರ್ಶನ:
ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಶಿವಗಂಗೆ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಕೆಲ ಸಂಘಟನೆಗಳ ಮುಖಂಡರು ತಾಲ್ಲೂಕು ಅಧ್ಯಕ್ಷರ ವಿರುದ್ದ ಕಪ್ಪುಪಟ್ಟಿ ಧರಿಸಿ ಘೋಷಣೆಗಳನ್ನು ಮೊಳಗಿಸಿದ್ರು. ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರನ್ನು ಆಹ್ವಾನಿಸದೇ ತಾಲೂಕು ಅಧ್ಯಕ್ಷರು ನಮಗೆ ಅಗೌರವ ತೋರಿದ್ದಾರೆ ಎಂದು ಕಾರ್ಯಕ್ರಮವನ್ನು ಮುಂದೂಡುವಂತೆ ಒತ್ತಾಯಿಸಿದರು.