ಬೆಂಗಳೂರು: ಪ್ರತಿ ವರ್ಷ ದೀಪಾವಳಿ ಹಬ್ಬ ಬಂದಾಗ ಪಟಾಕಿ ಅನಾಹುತ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದರೆ ದುರ್ಘಟನೆಗಳನ್ನು ತಡೆಯಬಹುದು.
ಪಟಾಕಿ ಹೊಡೆಯುವಾಗಲೋ, ಹೊಡೆಯುವುದನ್ನು ನೋಡಲು ನಿಂತಿದ್ದಾಗಲೋ ಅಥವಾ ರಸ್ತೆ ಬದಿ ಓಡಾಡುವಾಗ ಪಟಾಕಿ ಸಿಡಿದು ಅಮೂಲ್ಯವಾದ ಕಣ್ಣುಗಳಿಗೆ ಹಾನಿಯಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್, '6 ರಿಂದ 16 ವರ್ಷದ ಮಕ್ಕಳ ಕಣ್ಣುಗಳಿಗೆ ಅತಿ ಹೆಚ್ಚು ಹಾನಿಯಾಗಿದೆ. ನಿನ್ನೆ (ಶುಕ್ರವಾರ) ಒಂದೇ ದಿನ 11 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್ 31ರಿಂದ ಇಲ್ಲಿವರೆಗೆ ಮಿಂಟೋ ಆಸ್ಪತ್ರೆಯಲ್ಲೇ 18 ಪ್ರಕರಣಗಳು ದಾಖಲಾಗಿವೆೆ. ಇದರಲ್ಲಿ ಪಟಾಕಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಕಣ್ಣುಗಳು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಉಳಿದಂತೆ ಇತರ ರೋಗಿಗಳು ದಿನಕಳೆದಂತೆ ಗುಣಮುಖರಾಗಲಿದ್ದಾರೆ' ಎಂದು ವಿವರಿಸಿದರು.
'ಬಿಜಲಿ, ಭೂಚಕ್ರ, ಫ್ಲವರ್ ಪಾಟ್ ಪಟಾಕಿ ಹೊಡೆಯಲು ಹೋಗಿ ಕಣ್ಣಿಗೆ ಹಾನಿಯಾಗಿದೆ. ಕೆಲವು ಮಕ್ಕಳು ಕಣ್ಣಿಗೆ ಪಟಾಕಿ ಸಿಡಿದಾಗ ಕಣ್ಣು ಉಜ್ಜಿಕೊಂಡಿರುವುದರಿಂದ ರೆಪ್ಪೆ ಹಾಗು ಕಣ್ಣಿನ ಸುತ್ತ ಹೆಚ್ಚಿನ ಗಾಯವಾಗಿದೆ. ದೀಪಾವಳಿ ಹಬ್ಬವನ್ನು ವಾರಗಳ ಕಾಲ ಆಚರಣೆ ಮಾಡುವುದರಿಂದ ಮಕ್ಕಳು, ಪೋಷಕರು ಜಾಗೃತರಾಗಿ ಇರಬೇಕು' ಎಂದು ಡಾ.ಸುಜಾತ ತಿಳಿಸಿದ್ದಾರೆ.
ನಗರದ ನಾರಾಯಣ ನೇತ್ರಾಲಯದಲ್ಲಿ ಇಲ್ಲಿಯವರೆಗೆ 9 ಪ್ರಕರಣಗಳು ದಾಖಲಾಗಿವೆ.
ಪಟಾಕಿ ಅನಾಹುತದ ವರ್ಷಗಳ ಚಿತ್ರಣ ಹೀಗಿದೆ:
ವರ್ಷ- ಪ್ರಕರಣಗಳು
- 2008- 57
- 2009- 57
- 2010- 61
- 2011- 63
- 2012- 47
- 2013- 61
- 2014- 65
- 2015- 32
- 2016 -33
- 2017- 45
- 2018 -46
- 2019 -48
- 2020 -23
- 2021- 18( ನ.6ರ ವರೆಗೆ)
ವರ್ಷದಿಂದ ವರ್ಷಕ್ಕೆ ಪಟಾಕಿಯಿಂದಾದ ಅನಾಹುತ ಪ್ರಕರಣಗಳು ಕಡಿಮೆಯಾಗಿದ್ದು, ಕಳೆದ ವರ್ಷ 23 ಮಂದಿಗೆ ಪಟಾಕಿಯಿಂದ ಹಾನಿಯಾಗಿತ್ತು. ಇದರಲ್ಲಿ 17 ಜನರು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಉಳಿದ 6 ರೋಗಿಗಳು ಆಸ್ಪತ್ರೆಯಲ್ಲೇ ದೀರ್ಘ ಕಾಲ ಚಿಕಿತ್ಸೆ ಪಡೆದಿದ್ದರು.
ಮುಂದಿನ ದಿನದಲ್ಲಿ ಚಿಕ್ಕ ದೀಪಾವಳಿ ಹಾಗು ತುಳಸಿ ಹಬ್ಬ ಆಚರಣೆ ಮಾಡಲಿದ್ದು, ಆ ದಿನಗಳಂದು ಕೂಡ ಜನರು ಪಟಾಕಿ ಹೊಡೆದು ಹಬ್ಬ ಆಚರಿಸುತ್ತಾರೆ. ಹೀಗಾಗಿ ಮತ್ತೊಂದು ವಾರ ಕಾದು ನೋಡಿದರೆ ಈ ವರ್ಷ ಎಷ್ಟು ಪಟಾಕಿಯಿಂದ ಹಾನಿ ಪ್ರಕರಣಗಳು ವರದಿಯಾಗಿವೆ ಎಂಬುದು ತಿಳಿಯಲಿದೆ.
ಇದನ್ಣೂ ಓದಿ: ಪಟಾಕಿ ತಂದ ಆಪತ್ತು: 11 ವರ್ಷದೊಳಗಿನ ಮಕ್ಕಳಿಗೆ ಈ ಬಾರಿ ಹೆಚ್ಚು ಹಾನಿ