ಬೆಂಗಳೂರು : ಇತ್ತ ಮಾಡಿರುವ ಕೆಲಸಕ್ಕೆ ಸಂಬಳ ಕೇಳಿದರೆ ಸರ್ಕಾರದಿಂದ ಹಣ ಬಂದಿಲ್ಲ. ಬೇಕಾದರೆ ಮಾಡಿ ಇಲ್ಲವಾದರೆ ಹೋಗಿ ಅಂತಾ ಗುತ್ತಿಗೆ ಪಡೆದಿರುವ ಸಂಸ್ಥೆ ಮಾಲೀಕರು ಸಿಬ್ಬಂದಿಗೆ ಆವಾಜ್ ಹಾಕ್ತಿದ್ದಾರೆ. 104 ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಹಾಯ ಮಾಡುವವರೇ ಇಲ್ಲದಂತಾಗಿದೆ.
ಹುಬ್ಬಳ್ಳಿ ಹಾಗೂ ಬೆಂಗಳೂರಿನ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಡಿ 150ಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೆಲಸದ ಅವಧಿಗೂ ಮೀರಿ ದುಡಿದಿದ್ದಾರೆ. ವಾರದ ರಜೆ ತೆಗೆದುಕೊಳ್ಳದೇ ದುಡಿದಿರುವ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನವನ್ನೇ ನೀಡಿಲ್ಲ.
ಇನ್‌ಸೆಂಟಿವ್ ಕೊಡಿಸುವ ಭರವಸೆ ನೀಡಿದ್ದ ಮೇಲಾಧಿಕಾರಿಗಳು ಇದೀಗ ಮಾತು ಬದಲಿಸಿದ್ದಾರೆ ಎಂದು ಆರೋಗ್ಯ ಸಿಬ್ಬಂದಿ ಆರೋಪಿಸಿದ್ದಾರೆ. ಅತ್ತ ಹಣವೂ ಇಲ್ಲ, ಇತ್ತ ಸಂಬಳವೂ ಇಲ್ಲ. ವರ್ಷಾನುಗಟ್ಟಲೇ ಕೆಲಸ ಮಾಡಿದರೂ ಇನ್ನೂ ಸಂಬಳ ಹೆಚ್ಚಳಗೊಂಡಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲ ಪ್ರಶ್ನೆ ಮಾಡಿದರೆ ಮುಂದಿನ ದಿನದಿಂದಲೇ ಶಿಫ್ಟ್ ಬದಲಾವಣೆ, ಅದನ್ನೂ ಪ್ರಶ್ನೆ ಮಾಡಿದರೆ ಟರ್ಮಿನೇಟ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆಂದು ಸಿಬ್ಬಂದಿ ಆರೋಪಿಸಿದ್ದಾರೆ.
ಈ ಬಗ್ಗೆ ಇಂದು ಆಯುಕ್ತರಿಗೆ ಮನವಿ ಪತ್ರ ನೀಡಲು ಸಿಬ್ಬಂದಿ ಆರೋಗ್ಯಸೌಧಕ್ಕೆ ಆಗಮಿಸಿದ್ದರು. ನೋಂದಣಿ ಅಧಿಕಾರಿ, ಆರೋಗ್ಯ ಸಲಹಾ ಅಧಿಕಾರಿ, ಆಪ್ತ ಸಮಾಲೋಚನಾ ಅಧಿಕಾರಿ ಇವರನ್ನೊಳಗೊಂಡ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಮನವಿ ಪತ್ರ ಸಲ್ಲಿಸಲಿದ್ದಾರೆ.