ಬೆಂಗಳೂರು: ಸಹೊದ್ಯೋಗಿಗಿಂತ ಉತ್ತಮ ಅರ್ಹತೆ ಹೊಂದಿದ್ದರೂ, ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯಿಂದ ವಂಚಿತರಾಗಿದ್ದ ಮಂಡ್ಯ ಮೂಲದ ವಕೀಲರೊಬ್ಬರಿಗೆ ಹತ್ತು ವರ್ಷಗಳ ಕಾನೂನು ಹೋರಾಟದ ಬಳಿಕ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ತನಗಿಂತ ಕಡಿಮೆ ಅಂಕ ಮತ್ತು ಅರ್ಹತೆ ಹೊಂದಿರುವ ವಕೀಲ ಅಶೋಕ್ ಕುಮಾರ್ ಅವರನ್ನು ಪಿಪಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದ್ದ ಪ್ರತಿವಾದಿ ವಕೀಲ ಪಿ.ಸಿ.ರೇವಣ್ಣ ಅವರ ಮನವಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ. ಹಾಗೆಯೇ ಅರ್ಹ ಅಭ್ಯರ್ಥಿ ಆಯ್ಕೆ ಮಾಡದಿರುವ ಸರ್ಕಾರ 10 ಲಕ್ಷ ರೂಪಾಯಿಯನ್ನು ಅವಕಾಶ ವಂಚಿತ ವಕೀಲ ರೇವಣ್ಣ ಅವರಿಗೆ ನೀಡಬೇಕು ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
2009ರಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರ್ಕಾರಿ ಅಸಿಸ್ಟೆಂಟ್ ಪ್ಲೀಡರ್ ಆಯ್ಕೆ ಸಮಿತಿ ಒಟ್ಟು 144 ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ನೇಮಕಾತಿ ಮಾಡಿತ್ತು. ಈ ವೇಳೆ ನೇಮಕಾತಿ ಸಮಿತಿ ಅಧಿಕಾರಿಗಳು ವಕೀಲ ಅಶೋಕ್ ಕುಮಾರ್ ಅವರು ಪಡೆದಿದ್ದ 84.40 ಅಂಕಗಳನ್ನು 87.40 ಅಂಕಗಳಾಗಿ ಬಿಂಬಿಸಿ ಅವರಿಗೆ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆ ನೀಡಿದ್ದರು. ಆಯ್ಕೆ ಸಮಿತಿಯ ಈ ಕ್ರಮ ಪ್ರಶ್ನಿಸಿ ಪರೀಕ್ಷೆಯಲ್ಲಿ 86.20 ಅಂಕ ಪಡೆದಿದ್ದ ವಕೀಲ ಪಿ.ಸಿ. ರೇವಣ್ಣ ಕೆಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ, ಆಯ್ಕೆ ಸಮಿತಿ ಅಕ್ರಮ ಎಸಗಿದ್ದು, ಈವರೆಗೆ ಅಶೋಕ್ ಅವರಿಗೆ ನೀಡಿರುವ ಸಂಬಳದಷ್ಟು ಮೊತ್ತದ ಪರಿಹಾರ ನೀಡುವಂತೆ ಆದೇಶಿಸಿತ್ತು.
ತಮ್ಮನ್ನು ಹುದ್ದೆಯಿಂದ ತೆರವು ಮಾಡಲು ನೀಡಿದ ಕೆಎಟಿ ಆದೇಶ ಪ್ರಶ್ನಿಸಿ ಅಶೋಕ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಇದೀಗ ಕೆಎಟಿ ಆದೇಶ ಎತ್ತಿಹಿಡಿದಿದ್ದು, ವಕೀಲ ರೇವಣ್ಣ ಅವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಈ ಹಣವನ್ನು ಆಯ್ಕೆ ಸಮಿತಿಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.