ಬಳ್ಳಾರಿ : ತಾಲೂಕಿನ ಕೋಳೂರು ಗ್ರಾಮದ ಬಳಿಯ ಕಾಲುವೆಯಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿನ ಜಾಗೃತಿ ನಗರ ನಿವಾಸಿ ನೂರ್‌ಜಾನ್ (33) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮೂರು ಮಕ್ಕಳನ್ನು ಹೊಂದಿರುವ ಮೃತ ಮಹಿಳೆ ನೂರಜಾನ್, ಮೊದಲ ಪತಿ ನಿಧನವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು ಎನ್ನಲಾಗ್ತಿದೆ.
ಇಂದು ಕೋಳೂರು ಗ್ರಾಮದ ಬಳಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ನೂರ್‌ಜಾನ್ ಅವರ ಮೃತದೇಹವನ್ನು ರವಾನೆ ಮಾಡಲಾಗಿದೆ. ಘಟನೆಗೆ ಕಾರಣ ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಿಎಸ್ಐ ಹಲ್ಲೆ ಖಂಡಿಸಿ ಪ್ರತಿಭಟನೆ : ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಿಎಸ್ಐ ಮಣಿಕಂಠ ಆಗಮಿಸುವ ಮುನ್ನ ಜನ ಸೇರಿದ್ದಾರೆ. ಈ ವೇಳೆ ಜನತೆಯನ್ನು ಚದುರಿಸಲು ಪಿಎಸ್ಐ ಲಾಠಿ ಬೀಸುವುದರೊಂದಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಲಾಠಿಯಿಂದ ಹಲ್ಲೆ ಮಾಡಿದ ಹಿನ್ನೆಲೆ ರೈತ ಈರಣ್ಣ ಎಂಬುವರು ಗಾಯಗೊಂಡು ಅಸ್ವಸ್ಥಗೊಂಡಿದ್ದಾರೆ. ಪಿಎಸ್ಐ ವರ್ತನೆ ಖಂಡಿಸಿ ಕೋಳೂರು ಗ್ರಾಮದಲ್ಲಿ ರಸ್ತೆ ತಡೆದು ಹಲ್ಲೆ ಮಾಡಿದ ಪಿಎಸ್ಐ ಅವರನ್ನು ಅಮಾನತು ಮಾಡಬೇಕೆಂದು ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಂಚಾರ ವ್ಯತ್ಯಯ : ಪ್ರತಿಭಟನೆಯಿಂದಾಗಿ ಬಳ್ಳಾರಿಯಿಂದ ಕಲಬುರಗಿ, ರಾಯಚೂರು ಕಡೆ ಹೋಗುವ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿತ್ತು.
ಸಂಧಾನ : ತೀವ್ರ ಗಾಯಗೊಂಡ ರೈತನನ್ನು ಬಳ್ಳಾರಿಯ ವಿಮ್ಸ್ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೋಳೂರು ಗ್ರಾಮದಲ್ಲಿ ನಡೆದ ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಜೆ.ಎನ್. ಗಣೇಶ್ ಆಗಮಿಸಿದ್ದಾರೆ. ಬಳಿಕ ಗ್ರಾಮಸ್ಥರು ಹಾಗೂ ಸಿಪಿಐ ಚಂದನ್ ಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿ ಸಂಧಾನಕ್ಕೆ ಮುಂದಾಗಿದ್ದಾರೆ. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಬೈಕ್ ಅಪಘಾತ - ಇಬ್ಬರು ಸವಾರರು ಸಾವು