ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅವಳಿ ಗ್ರಾಮಗಳಾದ ಗೊಲ್ಲರಹಟ್ಟಿ ಹಾಗೂ ತಾಂಡಾದ ಯುವಕರ ನಡುವೆ ಕ್ಷುಲಕ ಕಾರಣಕ್ಕೆ ಮಾರಾಮಾರಿ ನಡೆದಿದೆ.
ಗೊಲ್ಲರಹಟ್ಟಿಯ ಯುವಕನೊಬ್ಬ ಎತ್ತಿನ ಬಂಡಿಯಲ್ಲಿ ಹೋಗುತ್ತಿರುವಾಗ, ರಸ್ತೆಯಲ್ಲಿ ಆಟವಾಡುತ್ತಾ ಬಂದ ತಾಂಡಾದ ಬಾಲಕನಿಗೆ ಬಂಡಿ ತಗುಲಿದೆ. ಇದರಿಂದ ಕೋಪಕೊಂಡ ತಾಂಡಾದ ಯುವಕನೊಬ್ಬ, ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ಯುವಕನಿಗೆ ಹೊಡೆದು ಗಾಯಗೊಳಿಸಿದ್ದ. ಇದರಿಂದ ಎರಡು ಗ್ರಾಮಗಳ ನಡುವೆ ಘರ್ಷಣೆ ಉಂಟಾಗಿತ್ತು. ಬಳಿಕ ಹಿರಿಯರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಲಾಗಿತ್ತು.
ಆದರೆ, ಇಷ್ಟಕ್ಕೆ ಸುಮ್ಮನಾಗದ ಎರಡು ಗ್ರಾಮದ ಯುವಕರು ಮಧ್ಯಾಹ್ನ ಮತ್ತೆ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಗೊಲ್ಲರಹಟ್ಟಿಯ ಹಾಗೂ ತಾಂಡಾದ ಹಲವು ಯುವಕರು ಗಂಭೀರ ಗಾಯಗೊಂಡಿದ್ದು, ಅವರನ್ನ ಬಳ್ಳಾರಿ ವಿಮ್ಸ್ಗೆ ದಾಖಲಿಸಲಾಗಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಕೂಡ್ಲಿಗಿ ಪಟ್ಟಣ ಪಂಚಾಯತಿ ಚುನಾವಣೆಯ ಹಳೆಯ ದ್ವೇಷದಿಂದ ಸಹ ಮಾರಾಮಾರಿ ನಡೆದಿದೆ ಎನ್ನಲಾಗುತ್ತಿದೆ.