ಬಳ್ಳಾರಿ: ಖ್ಯಾತ ವ್ಯಕ್ತಿ, ರಾಜಕಾರಣಿ, ಸಿನಿಮಾ ನಟರು ಮೃತಪಟ್ಟಾಗ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಜನರು ಬರುವುದು ಸಹಜ. ಬುದ್ಧಿಮಾಂದ್ಯ, ಹುಚ್ಚನೊಬ್ಬ ಸಾವನ್ನಪ್ಪಿದಾಗ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದ್ದನ್ನು ನೀವು ಕೇಳಿದ್ದೀರಾ? ನೋಡಿದ್ದೀರಾ?.
ಬಳ್ಳಾರಿ ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಇಂಥದ್ದೊಂದು ಕುತೂಹಲಕಾರಿ ಘಟನೆ ನಡೆದಿದೆ. ಪಟ್ಟಣದ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟಿದ್ದು, ಅವನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಲ್ಲದೇ ಊರ ತುಂಬಾ ಅವನ ಫೋಟೋವುಳ್ಳ ಫ್ಲೆಕ್ಸ್, ಬ್ಯಾನರ್ ಹಾಕಿಸಿ ಅದ್ಧೂರಿಯಾಗಿ ಅಂತ್ಯಕ್ರಿಯೆ ಮಾಡಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ ಬಸವ ಆಲಿಯಾಸ್ ಹುಚ್ಚ ಬಸ್ಯಾ(45) ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಜನರು ಅವನ ಅಂತ್ಯಕ್ರಿಯೆ ನಡೆಸಲು ಮಂಗಳವಾದ್ಯಗಳನ್ನು ನುಡಿಸುತ್ತಾ, ಜೈಕಾರ ಹಾಕುತ್ತಾ ಮೆರವಣಿಗೆ ಮಾಡಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
1 ರೂಪಾಯಿ ಮಾತ್ರ ಭಿಕ್ಷೆ ಪಡೆಯುತ್ತಿದ್ದ!
ಮಾನಸಿಕ ಅಸ್ವಸ್ಥನಾಗಿದ್ದರೂ ಯಾರಿಗೂ ತೊಂದರೆ ನೀಡದ ಹುಚ್ಚ ಬಸ್ಯಾ 1 ರೂಪಾಯಿಯನ್ನು ಮಾತ್ರ ಭಿಕ್ಷೆ ಪಡೆಯುತ್ತಿದ್ದ. ಜನರು ಎಷ್ಟೇ ಹಣ ಕೊಟ್ಟರೂ ಅದನ್ನು ಮರಳಿಸುತ್ತಿದ್ದನಂತೆ. ಅಲ್ಲದೇ, ಬಸ್ಯಾನಿಗೆ ಭಿಕ್ಷೆ ನೀಡಿದರೆ ತಮಗೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆಯಾಗಿತ್ತು. ಇದರಿಂದ ಬಸ್ಯಾ ಪಟ್ಟಣದ ಅದೃಷ್ಟ ಎಂದೇ ಜನರು ಭಾವಿಸಿದ್ದರು.
ಜಿಲ್ಲೆಯ ರಾಜಕಾರಣಿಗಳ ಹೆಸರನ್ನು ನೆನಪಿಟ್ಟುಕೊಂಡು ಸ್ಪಷ್ಟವಾಗಿ ಹೇಳುತ್ತಿದ್ದ ಬಸ್ಯಾ, ಜನರ ಪ್ರೀತಿಗೆ ಪಾತ್ರನಾಗಿದ್ದ ಎಂಬುದಕ್ಕೆ ಅವನ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರೇ ಸಾಕ್ಷಿ.