ಬಳ್ಳಾರಿ: ತಹಶೀಲ್ದಾರ್ ಹೆಚ್.ವಿಶ್ವನಾಥ್ ನೇತೃತ್ವದ ವಿಶೇಷ ತಂಡ, ಹೊಸಪೇಟೆ ನಗರದಲ್ಲಿ ದಿನಸಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ, 5 ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಕ್ ತನ್ವೀರ್ ಅಶೀಫ್ ತಿಳಿಸಿದ್ದಾರೆ.
ಹೊಸಪೇಟೆ ನಗರದ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಇತರೆ ವಸ್ತುಗಳನ್ನ ಕಿರಾಣಿ ಅಂಗಡಿಯ ಮಾಲೀಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದ ತಹಶೀಲ್ದಾರ್ ಹಾಗೂ ತಂಡ, ಸಾರ್ವಜನಿಕರ ಕೈಯಲ್ಲಿ ಹಣವನ್ನು ಕೊಟ್ಟು ಖರೀದಿಸಲು ಹೇಳಿ, ಬೆಲೆಯನ್ನ ತಪಾಸಣೆ ಮಾಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಒಟ್ಟು 5 ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗವಿರುವ ಬಾಲಾಜಿ ಬಜಾರ್ ಸ್ಟೋರ್ಸ್, ನಗರ ಪೊಲೀಸ್ ವಸತಿ ಗೃಹಗಳ ಎದುರಿಗಿರುವ ಲಕ್ಷ್ಮೀ ನಾರಾಯಣ ಜನರಲ್ ಸ್ಟೋರ್ಸ್, ಮೇನ್ ಬಜಾರ್ನಲ್ಲಿರುವ ಜನಾದ್ರಿ ರಾಮಚಂದ್ರಪ್ಪ ಅಂಡ್ ಸನ್ಸ್ ಅಂಗಡಿ, ಪಟೇಲ್ ನಗರದ ಶ್ರೀ ಶಿರಡಿ ಸಾಯಿ ಬಜಾರ್ ಅಂಗಡಿಗಳ ಮೇಲೆ ದಾಳಿ ನಡೆಸಿ, ಅಂಗಡಿಗಳನ್ನ ಬಂದ್ ಮಾಡಿಸಿದ್ದಾರೆ.