ಬಳ್ಳಾರಿ : ನಗರದಲ್ಲಿ ನಿನ್ನೆ (ಗುರುವಾರ) ರಾತ್ರಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. 100ಕ್ಕೂ ಹೆಚ್ಚು ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಆತಂಕ ಸೃಷ್ಟಿಸಿದೆ. ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಸೋಮಶೇಖರ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯೆಲ್ಲ ಜಾಗರಣೆ ಮಾಡಿದರು. ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ಮನೆಗಳ ಮೇಲೆ, ವಾಹನಗಳ ಮೇಲೆ ಮರಗಳು ಬಿದ್ದಿವೆ. ಸಂಗನಕಲ್ಲು ರಸ್ತೆಯ ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದಿದೆ.
ಎಸ್ಎನ್ ಪೇಟ್, ಮಾರುತಿ ಕಾಲೋನಿ, ಹನುಮಾನ ನಗರ ಸೇರಿದಂತೆ ಹಲವೆಡೆ ಭೇಟಿ ನೀಡಿದ ನಗರ ಶಾಸಕ ಸೋಮಶೇಖರ್ ರೆಡ್ಡಿ, ಕಾರ್ಪೊರೇಟರ್ಗಳ ಜತೆಗೆ ಜನರ ಸಮಸ್ಯೆ ಆಲಿಸಿದರು.
ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳ ತೆರವು, ವಿದ್ಯುತ್ ಕಂಬಗಳನ್ನ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಸಿದರು. ಭಾರಿ ಮಳೆಯಿಂದಾಗಿ ಎಸ್ಎನ್ ಪೇಟ್ ಅಂಡರ್ಪಾಸ್ನಲ್ಲಿ ನೀರು ನಿಂತಿದ್ದು, ವಾಹನ ಸಂಚಾರ ಬಂದ್ ಆಗಿದೆ.