ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿಯ ಪೊಲೀಸ್ ವಸತಿ ಗೃಹಕ್ಕಿಂದು ರಾಜ್ಯ ಪೊಲೀಸ್ ಗೃಹ ನಿರ್ಮಾಣ ಸಹಕಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಔರಾದ್ಕರ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 22 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2015ರ ಪೊಲೀಸ್ ವಸತಿ ಗೃಹ ಯೋಜನೆ ಅಡಿಯಲ್ಲಿ ಅಂದಾಜು 8 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ 5 ಸಾವಿರ ಮನೆಗಳು ಪೂರ್ಣಗೊಂಡು ಹಸ್ತಾಂತರ ಮಾಡಲಾಗಿದೆ. ಉಳಿದ 3 ಸಾವಿರ ಮನೆಗಳು ಪ್ರಗತಿ ಹಂತದಲ್ಲಿದ್ದು, 2020 ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದರು.
ಸದ್ಯ, ರಾಜ್ಯದಲ್ಲಿ 100ಕ್ಕೆ ಶೇ.47ರಷ್ಟು ಮನೆಗಳಿವೆ. 22 ಸಾವಿರ ನೂತನ ಮನೆಗಳು ನಿರ್ಮಾಣವಾದಲ್ಲಿ ಶೇ.67ಕ್ಕೆ ಏರಿಕೆ ಆಗಲಿದೆ. ರಾಜ್ಯದಲ್ಲಿ ಶಿಥಿಲಗೊಂಡ ಮನೆಗಳ ಮಾಹಿತಿ ತರಿಸಿಕೊಳ್ಳಲಾಗಿದೆ. ಅವುಗಳನ್ನ ನವೀಕರಣಗೊಳಿಸಬಹುದಾ ಅಥವಾ ನೆಲಸಮಗೊಳಿಸಿ ಮರು ನಿರ್ಮಾಣ ಮಾಡಬೇಕಾ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಪೊಲೀಸ್ ವಸತಿ ಗೃಹ ನವೀಕರಣಕ್ಕೆ ಸರ್ಕಾರ, ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದೆ. ಆದರೆ, ಅನುದಾನ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.
ಇನ್ನು, ಪೊಲೀಸ್ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆಗೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವೇತನ ಹೆಚ್ಚಳಕ್ಕೆ ನಾನು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಈ ಕುರಿತು ಪ್ರತಿಯೊಂದು ಸಭೆಯಲ್ಲಿ ಚರ್ಚಿಸುತ್ತಿದ್ದು, ಪ್ರತಿಯೊಬ್ಬರ ಸ್ಪಂದನೆಯಿದೆ. ಮುಂದಿನ ದಿನಗಳಲ್ಲಿ ನೂತನ ವೇತನ ಜಾರಿಯಾಗುವ ವಿಶ್ವಾಸವಿದೆ. ಇನ್ನು, ಹರಪನಹಳ್ಳಿ ಪೊಲೀಸ್ ಠಾಣೆ ನಿರ್ಮಾಣ ಕುರಿತು ನಮ್ಮ ಬಳಿ ಯಾವುದೇ ಪ್ರಸ್ತಾವನೆ ಇಲ್ಲ. 2013ರಲ್ಲಿ ಪ್ರಸ್ತಾವನೆ ಸಲ್ಲಿಸಿರುವ ಕುರಿತು ದಾಖಲೆಗಳಿವೆ. ಹೊಸದಾಗಿ ಪ್ರಸ್ತಾವನೆ ಬಂದ ನಂತರ ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನ ಮಾಡುತ್ತೇನೆ ಎಂದರು.